ಪದ್ಯಾಣ ಪ್ರಶಸ್ತಿಗೆ ಬಲಿಪ ನಾರಾಯಣ ಭಾಗವತ ಆಯ್ಕೆ

ಪುತ್ತೂರು, ಡಿ. 4: ತೆಂಕುತಿಟ್ಟು ಯಕ್ಷಗಾನದ ಮಹಾ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಈ ಸಾಲಿನ ಪದ್ಯಾಣ ಪ್ರಶಸ್ತಿ ಘೋಷಣೆಯಾಗಿದೆ. ಸುಳ್ಯ ತಾಲೂಕು ಕಲ್ಮಡ್ಕದ ಪದ್ಯಾಣ ಪ್ರಶಸ್ತಿ ಸಮಿತಿಯ ಆಯೋಜನೆಯಲ್ಲಿ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಡಿ.10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ವಹಿಸಲಿದ್ದಾರೆ. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಇದರ ಅಧ್ಯಕ್ಷ ಯು. ಗಂಗಾಧರ ಭಟ್, ಹಿರಿಯ ಅಥರ್ದಾರಿ ಉಡುವೆಕೋಡಿ ಸುಬ್ಬಪ್ಪಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಾವಿದ ವಾಸುದೇವ ರಂಗಾಭಟ್ ಆಭಿನಂದನಾ ಭಾಷಣ ಮಾಡಲಿದ್ದಾರೆ.
ಪದ್ಯಾಣ ಕುಟುಂಬದ ಹಿರಿಯರಾದ ಕೀರ್ತಿಶೇಷ ಪದ್ಯಾಣ ಪುಟ್ಟು ಭಾಗವತರ ನೆನಪಿನಲ್ಲಿ ಪದ್ಯಾಣ ಪ್ರಶಸ್ತಿ ಸ್ಥಾಪಿತವಾಗಿದೆ. ಕಳೆದ ವರುಷ ಸ್ಥಾಪಿಸಿದ ಮೊದಲ ಪ್ರಶಸ್ತಿಯನ್ನು ಹಿರಿಯ ಭಾಗವತರಾದ ಅಗರಿ ರಘುರಾಮ ಭಾಗವತರಿಗೆ ಪ್ರದಾನಿಸಲಾಗಿತ್ತು. ಪದ್ಯಾಣ ಮನೆತನಕ್ಕೆ ಯಕ್ಷ ಕಲೆಯು ನೀಡಿದ ಗೌರವಕ್ಕೆ ಪ್ರತಿಯಾಗಿ ಕಲಾಕೃತಜ್ಞತೆಯ ದ್ಯೋತಕವಾಗಿ ಪದ್ಯಾಣ ಪ್ರಶಸ್ತಿ ಸ್ಥಾಪಿತವಾಗಿದೆ. ಈ ವರುಷ ಬಲಿಪ ನಾರಾಯಣ ಭಾಗವತರಿಗೆ ಪ್ರಶಸ್ತಿ. ತೆಂಕುತಿಟ್ಟಿನ ಹಳೆಯ ಪಾರಂಪರಿಕೆ ಶೈಲಿಯೊಂದಕ್ಕೆ ಸಲ್ಲುವ ಗೌರವವಿದು. ಇಂದಿನ ಯಕ್ಷಗಾನ ರಂಗದಲ್ಲಿ ಸರ್ವಾನುಮತ ಮತ್ತು ಶ್ರೇಷ್ಠತೆ ಎರಡನ್ನೂ ಹೊಂದಿದ ಬೆರಳೆಣಿಕೆಯ ಸಾಧಕರಲ್ಲಿ ಪ್ರಾಯಃ ಬಲಿಪ ನಾರಾಯಣ ಭಾಗವತರು ಮೂರ್ಧನ್ಯರು. ದೇಶದ ಪ್ರಾಚೀನ ರಂಗಭೂಮಿಯ ಅಗ್ರಪಂಕ್ತಿಯಲ್ಲಿ ಬಲಿಪರು ಸ್ಥಾನ ಪಡೆದವರು. ಎಂಭತ್ತು ವರುಷದ ಬಲಿಪರು ಕಳೆದ ಎಪ್ಪತ್ತು ವರುಷದಿಂದಲೂ ಹಾಡುತ್ತಿದ್ದಾರೆ. ಈಗಲೂ ಭಾಗವತಿಕೆ ಮಾಡುತ್ತಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಶ್ರೀ ಹನುಮಗಿರಿ ಮೇಳದವರಿಂದ ದಕ್ಷಾಧ್ವರ-ಗಿರಿಜಾಕಲ್ಯಾಣ ಪ್ರಸಂಗಗಳ ಬಯಲಾಟ ಜರುಗಲಿದೆ ಎಂದು ಪದ್ಯಾಣ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







