ಠಾಣೆಯ ಒಳಗೆ ಪೊಲೀಸ್ ಅಧಿಕಾರಿಯ ಡಾನ್ಸ್!

ಅಸನ್ಸೊಲ್, ಡಿ.4: ಪೊಲೀಸ್ ಠಾಣೆಯ ಒಳಗೆ ಡಾನ್ಸ್ ಮಾಡಿದ ಆರೋಪದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಘಟನೆ ಇಲ್ಲಿನ ಹಿರಾಪುರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹಿರಾಪುರ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಕರ್ತವ್ಯದ ವೇಳೆ ಠಾಣೆಯ ಒಳಗೆಯೇ ಬಾಲಿವುಡ್ ಹಾಡಿಗೆ ನೃತ್ಯ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಉಪನಿರೀಕ್ಷಕ ಸೇರಿದಂತೆ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಇನ್ನೋರ್ವ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಾಪುರ್ ಠಾಣೆಯ ಉಪನಿರೀಕ್ಷಕ ಕೃಷ್ಣ ಸದನ್ ಮೊಂಡಲ್ ಹಿಂದಿ ಹಾಡಿಗೆ ಕುಣಿಯುತ್ತಿರುವ ಮತ್ತು ಕೆಲವು ಮಹಿಳಾ ಅಧಿಕಾರಿಗಳು ಚಪ್ಪಾಳೆ ಬಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ.
ಬಂಗಾಳ ಪೊಲೀಸ್‌ನ ಅಧಿಕಾರಿಯ ವರ್ತನೆಯನ್ನು ಬಂಗಾಳ ಪೊಲೀಸ್ ನಿಯಂತ್ರಣ ಕಾಯ್ದೆ 1943ಯು ನಿರ್ದೇಶಿಸುತ್ತದೆ. ಇದರ ಹೊರತಾಗಿ ಪ್ರತಿಯೊಬ್ಬ ಸರಕಾರಿ ಉದ್ಯೋಗಿ ಕೂಡಾ 1960ರ ಸರಕಾರಿ ಸೇವಕರ ನಡತೆ ಕಾಯ್ದೆಗೆ ಬದ್ಧನಾಗಿರುತ್ತಾನೆ. ಇಂತಹ ಘಟನೆಗಳು ಸಾರ್ವಜನಿಕರ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆಯುಂಟಾಗುತ್ತದೆ. ಇಂತಹ ವರ್ತನೆಗಳು ಇಲಾಖೆಯಲ್ಲಿನ ಸಾಮರ್ಥ್ಯ ಮತ್ತು ಶಿಸ್ತಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುವಂತೆ ಅಸನ್ಸೊಲ್-ದುರ್ಗಾಪುರ ಕಮಿಷನರೇಟ್‌ನ ಆಯುಕ್ತರಾಗಿರುವ ಲಕ್ಷ್ಮಿ ನಾರಾಯಣ ಮೀನಾ ಅವರು ಜಿಲ್ಲಾಧಿಕಾರಿ ಅರಿಂದಮ್ ದತ್ತಾ ಚೌಧರಿಯವರನ್ನು ಕೋರಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅವರು ಈ ರೀತಿ ವರ್ತಿಸಲು ಕಾರಣವನ್ನು ನೀಡುವಂತೆ ಸೂಚಿಸಲಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಹೊರಗಿನವರು ಉಪಸ್ಥಿತರಿದ್ದರೇ ಎಂಬುದನ್ನೂ ತಿಳಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.







