ಶಶಿಕಲಾ-ದಿನಕರನ್ ಟೋಪಿ ಚಿಹ್ನೆ ವಿವಾದ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಹೊಸದಿಲ್ಲಿ, ಡಿ.4: ಮುಂಬರುವ ಆರ್‌ಕೆ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟೋಪಿ ಚಿಹ್ನೆಯನ್ನು ಬಳಸಲು ಅನುಮತಿ ನೀಡುವಂತೆ ಕೋರಿ ಶಶಿಕಲಾ-ದಿನಕರನ್ ಬಣ ದಿಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.
ಶಶಿಕಲಾ-ದಿನಕರನ್ ಬಣ, ಚುನಾವಣಾ ಆಯೋಗ ಮತ್ತು ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ಬಣದ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಇಂದರ್‌ಮೀತ್ ಕೌರ್ ಈ ಬಗ್ಗೆ ತೀರ್ಪನ್ನು ಸೋಮವಾರ 4 ಗಂಟೆಯಗೆ ನೀಡುವುದಾಗಿ ತಿಳಿಸಿದರು.
ಎರಡೆಲೆ ಚಿಹ್ನೆಯನ್ನು ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣಕ್ಕೆ ನೀಡಲು ಆದೇಶಿಸಿದ್ದ ಚುನಾವಣಾ ಆಯೋಗದ ನವೆಂಬರ್ 23ರ ಆದೇಶವನ್ನು ಪ್ರಶ್ನಿಸಿ ಶಶಿಕಲಾ-ದಿನಕರನ್ ಬಣ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯನ್ನು ಕೋರಿ ನ್ಯಾಯಾಲಯವು ಚುನಾವಣಾ ಆಯೋಗ ಮತ್ತು ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಕುರಿತ ಮುಖ್ಯ ಅರ್ಜಿಯ ವಿಚಾರಣೆ ಫೆಬ್ರವರಿ 12ರಂದು ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ವಿಚಾರಣೆಯ ವೇಳೆ ಶಶಿಕಲಾ-ದಿನಕರನ್ ಬಣಕ್ಕೆ ಟೋಪಿ ಚಿಹ್ನೆಯನ್ನು ನೀಡಿರುವ ನ್ಯಾಯಾಲಯದ ಕ್ರಮವನ್ನು ಚುನಾವಣಾ ಆಯೋಗ, ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣ ವಿರೋಧಿಸಿತ್ತು. ಹೀಗೆ ಚಿಹ್ನೆಯನ್ನು ನೀಡಲು ಕೇವಲ ರಿಟರ್ನಿಂಗ್ ಅಧಿಕಾರಿಗೆ ಮಾತ್ರ ಅಧಿಕಾರವಿದೆ ಎಂದು ಚುನಾವಣಾ ಆಯೋಗ ವಾದಿಸಿತ್ತು. ಶಶಿಕಲಾ-ದಿನಕರನ್ ಬಣಕ್ಕೆ ಟೋಪಿ ಚಿಹ್ನೆ ಸಿಗದಿದ್ದರೆ ರಿಟರ್ನಿಂಗ್ ಅಧಿಕಾರಿ ಅವರಿಗೆ ಬೇರೆ ಯಾವುದೇ ಉಚಿತ ಚಿಹ್ನೆಯನ್ನು ನೀಡಬಹುದಿತ್ತು ಎಂದು ಪಳನಿಸ್ವಾಮಿ-ಪನ್ನೀರ್ ಸೆಲ್ವಂ ಪರ ವಕೀಲರು ವಾದಿಸಿದ್ದರು.
ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ರಿಟರ್ನಿಂಗ್ ಅಧಿಕಾರಿ ಕೂಡಾ ಚುನಾವಣಾ ಆಯೋಗದ ಭಾಗವೇ ಆಗಿರುವ ಕಾರಣ ಆಯೋಗದ ನವೆಂಬರ್ 23ರ ಆದೇಶದ ವಿರುದ್ಧ ಹೋಗಲು ಸಾಧ್ಯವಿರುತ್ತಿರಲಿಲ್ಲ ಎಂದು ತಿಳಿಸಿತು.
ಟೋಪಿಯು ಒಂದು ಸ್ವತಂತ್ರ ಚಿಹ್ನೆಯಾಗಿದ್ದು ಅದನ್ನು ಯಾವುದೇ ವ್ಯಕ್ತಿಗೆ ಅಥವಾ ಸ್ವತಂತ್ರ ಅಭ್ಯರ್ಥಿಗೆ ಕಾಯ್ದಿರಿಸುವಂತಿಲ್ಲ ಎಂದು ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣ ಮತ್ತು ಚುನಾವಣಾ ಆಯೋಗ ವಾದಿಸಿತ್ತು. ನವೆಂಬರ್ 23ರ ಆದೇಶದಂತೆ ಶಶಿಕಲಾ ಮತ್ತು ದಿನಕರನ್ ಅವರು ಯಾವುದೇ ಬಣದ ಭಾಗವಾಗಿಲ್ಲ ಬದಲಿಗೆ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ ಎಂದು ಚುನಾವಣಾ ಆಯೋಗ ವಾದಿಸಿತ್ತು.







