ಪಲಿಮಾರು ಪರ್ಯಾಯ: ಡಿ.7ಕ್ಕೆ ಭತ್ತ ಮುಹೂರ್ತ, ಜ.3ಕ್ಕೆ ಸ್ವಾಮೀಜಿ ಪುರಪ್ರವೇಶ
ಉಡುಪಿ, ಡಿ.4: ಮುಂದಿನ ಜ.18ರಂದು ಎರಡನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಪರ್ಯಾಯ ಪೂರ್ವಸಿದ್ಧತೆಯ ಕೊನೆಯ ಕಾರ್ಯಕ್ರಮವಾದ ಭತ್ತ ಮುಹೂರ್ತ ಡಿ.7 ರಂದು ನಡೆಯಲಿದ್ದು, ಈಗ ದೇಶ ಸಂಚಾರದಲ್ಲಿರುವ ಸ್ವಾಮೀಜಿ ಜ.3ರಂದು ಅದ್ದೂರಿಯಾಗಿ ಪುರ ಪ್ರವೇಶ ಮಾಡಲಿದ್ದಾರೆ ಎಂದು ಪಲಿಮಾರು ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.
ಪಲಿಮಾರು ಮಠದ ಸ್ವಾಗತ ಕಚೇರಿಯಲ್ಲಿ ಇಂದು ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪೂರ್ವ ಸಿದ್ಧತೆಗಳಲ್ಲಿ ಕೊನೆಯದಾಗಿ ನಡೆಯುವ ಭತ್ತ ಮುಹೂರ್ತ ಬುಧವಾರ ಬೆಳಗ್ಗೆ 8:55ಕ್ಕೆ ಶ್ರೀಕೃಷ್ಣ ಮಠದ ಬಡಗುಮಳಿಗೆಯಲ್ಲಿ ನಡೆಯಲಿದ್ದು, ಬಳಿಕ 9:30ಕ್ಕೆ ರಾಜಾಂಗಣದ ಬಳಿ ಚಪ್ಪರ ಮುಹೂರ್ತವೂ ನಡೆಯಲಿದೆ ಎಂದು ಅವರು ಹೇಳಿದರು.
ಸಂಪ್ರದಾಯದಂತೆ ಪರ್ಯಾಯ ಪೀಠಾರೋಹಣಕ್ಕೆ ಮುನ್ನ ನಡೆಯುವ ಧಾರ್ಮಿಕ ಸಂಚಾರದಲ್ಲಿ ದೇಶಾದ್ಯಂತದ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತರು ಹಾಗೂ ಅಭಿಮಾನಿಗಳನ್ನು ಪರ್ಯಾಯಕ್ಕೆ ಆಹ್ವಾನಿಸುತ್ತಿರುವ ಪಲಿಮಾರು ಸ್ವಾಮೀಜಿ ಅವರು ಜ.3ರಂದು ಪುರಪ್ರವೇಶ ಮಾಡಲಿದ್ದಾರೆ. ಅಪರಾಹ್ನ 3:45ಕ್ಕೆ ಸ್ವಾಮೀಜಿ ಅವರನ್ನು ಜೋಡಕಟ್ಟೆ ಬಳಿ ಸ್ವಾಗತಿಸಿ ಅದ್ದೂರಿ ಮೆರವಣಿಯಲ್ಲಿ ರಥಬೀದಿಗೆ ಕರೆದು ತರಲಾಗುವುದು ಎಂದರು.
ಈ ಬಾರಿಯ ಪುರಪ್ರವೇಶ ಹಾಗೂ ಜ.18ರ ಬೆಳಗಿನ ಜಾವ ನಡೆಯುವ ಪರ್ಯಾಯ ಮೆರವಣಿಯ ಮಾರ್ಗವನ್ನು ಬದಲಾಯಿಸಲಾಗಿದ್ದು, ಮಾಮೂಲಿಯಾದ ಕೊಳ, ತೆಂಕುಪೇಟೆ ಮಾರ್ಗದ ಬದಲು, ಕೆ.ಎಂ.ಮಾರ್ಗ, ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಆಗಮಿಸಲಿದೆ. ಮೆರವಣಿಗೆಯ ಉಸ್ತುವಾರಿಯನ್ನು ಡಾ.ಮೋಹನ ಆಳ್ವ ಅವರದ್ದಾಗಿದೆ ಎಂದು ರಾಘವೇಂದ್ರ ಚಾರ್ಯ ನುಡಿದರು.
ಪಲಿಮಾರು ಸ್ವಾಮೀಜಿ, ಸಂಜೆ 6:35ಕ್ಕೆ ಶ್ರೀಮಠ ಪ್ರವೇಶಿಸುವರು. ಆ ಬಳಿಕ ಸಂಜೆ 7ಗಂಟೆಗೆ ರಥಬೀದಿಯಲ್ಲಿ ಹಾಕಲಾಗುವ ವಿಶೇಷ ವೇದಿಕೆಯಲ್ಲಿ ಅವರಿಗೆ ಪೌರ ಸನ್ಮಾನ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿರುವರು.
ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕಷರೂ, ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಶ್ರೀಕ್ಷೇತ್ರ ಬದರಿನಾಥದ ರಾವಲ್‌ಜೀ ಈಶ್ವರ ಪ್ರಸಾದ್ ನಂಬೂದರಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು.
ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಉದ್ಯಮಿ ಡಾ.ಜಿ. ಶಂಕರ್, ಡಾ.ಮೋಹನ ಆಳ್ವ ಉಪಸ್ಥಿತರಿರುವರು. ಸ್ವಾಮೀಜಿಗೆ ಉಡುಪಿ ನಗರಸಭೆ ವತಿಯಿಂದ ಪೌರ ಸನ್ಮಾನ ನಡೆಯಲಿದೆ.
ರಥಬೀದಿಯ ವೇದಿಕೆ ಶ್ರೀಪರವಿದ್ಯಾ ಮಂಟಪದಲ್ಲಿ ಜ.3ರಿಂದ 17ರವರೆಗೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.18ರಿಂದ 29ರವರೆಗೆ ರಾಜಾಂಗಣದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.4ರಿಂದ 16ರವರೆಗೆ ಪ್ರತಿದಿನ ಹೊರಕಾಣಿಕೆ ಸಮರ್ಪಣೆ ವಿವಿಧ ಪ್ರದೇಶಗಳಿಂದ ನಡೆಯಲಿದೆ ಎಂದವರು ವಿವರಿಸಿದರು.
ಈ ಬಾರಿಯ ಪರ್ಯಾಯಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ಪತ್ರಿಕಾಗೋಷ್ಠಿ ಯಲ್ಲಿ ಸಮಿತಿಯ ಅಧ್ಯಕ್ಷ ಶ್ರೀಧರ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಪದ್ಮನಾಭ ಭಟ್, ಮಟ್ಟಿ ಲಕ್ಷ್ಮಿನಾರಾಯಣ ರಾವ್, ಖಜಾಂಚಿ ರಮೇಶ್ ರಾವ್ ಬೀಡು ಉಪಸ್ಥಿತರಿದ್ದರು.







