ಕ್ಯೂಎಸ್ ಏಷ್ಯನ್ ವಿವಿ ರ್ಯಾಂಕಿಂಗ್: ಮಾಹೆಗೆ 198ನೆ ಸ್ಥಾನ

ಮಣಿಪಾಲ, ಡಿ.4: ಮಣಿಪಾಲದ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಡೀಮ್ಡ್ ವಿವಿ, ಕ್ಯೂಸ್ ವಿಶ್ವವಿದ್ಯಾಲಯ ರ್ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿಸಿದೆ ಎಂದು ಮಾಹೆಯ ಕುಲಪತಿ ಡಾ.ಎಚ್. ವಿನೋದ್ ಭಟ್ ಹೇಳಿದ್ದಾರೆ.
ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಯೂಎಸ್ ವಿವಿ ವಿಶ್ವ ರ್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಮಾಹೆ, 701ರಿಂದ 750ರೊಳಗಿನ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಭಾರತದ ಖಾಸಗಿ ವಿವಿಗಳಲ್ಲಿ ಮಾಹೆ ಪ್ರಥಮ ಸ್ಥಾನದಲ್ಲಿದೆ ಎಂದರು.
2018ನೇ ಸಾಲಿನ ಕ್ಯೂಎಸ್ ಏಷ್ಯನ್ ರ್ಯಾಂಕಿಂಗ್‌ನಲ್ಲಿ ಮಾಹೆ ಕಳೆದ ಬಾರಿಗಿಂತ ಎರಡು ಸ್ಥಾನ ಮೇಲಕ್ಕೇರಿ 198ನೇ ಸ್ಥಾನವನ್ನು ಪಡೆದಿದೆ. ಇಲ್ಲೂ ಭಾರತದ ವಿವಿಗಳಲ್ಲಿ ಒಟ್ಟಾರೆಯಾಗಿ 16ನೇ ಹಾಗೂ ಖಾಸಗಿ ವಿವಿಗಳಲ್ಲಿ ಮಾಹೆ ದೇಶದಲ್ಲೇ ಮೂರನೇ ಉತ್ತಮ ವಿವಿ ಎನಿಸಿಕೊಂಡಿದೆ ಎಂದವರು ನುಡಿದರು.
ಅದೇ ರೀತಿ 2018ನೇ ಸಾಲಿನ ಕ್ಯೂಎಸ್ ಬ್ರಿಕ್ಸ್ ದೇಶಗಳ ವಿವಿ ರ್ಯಾಂಕಿಂಗ್ ನಲ್ಲಿ 119ನೆ ರ್ಯಾಂಕ್ ಪಡೆದಿದೆ. ಬ್ರಿಕ್ಸ್ ದೇಶಗಳ ಒಟ್ಟು 9,000 ವಿವಿಗಳಲ್ಲಿ ಮಾಹೆ ಅಗ್ರಗಣ್ಯ ಶೇ.31ವಿವಿಗಳಲ್ಲಿ ಸ್ಥಾನ ಪಡೆದಿದೆ. ಇಲ್ಲೂ ದೇಶದ ಖಾಸಗಿ ವಿವಿಗಳಲ್ಲಿ ಮಾಹೆ ಎರಡನೇ ಅತ್ಯುತ್ತಮ ವಿವಿ ಎನಿಸಿಕೊಂಡಿದೆ ಎಂದು ಡಾ. ವಿನೋದ್ ಭಟ್ ವಿವರಿಸಿದರು.
ಈ ರ್ಯಾಂಕಿಂಗ್‌ನ್ನು ನೀಡುವಾಗ ವಿವಿಯ ಶೈಕ್ಷಣಿಕ ಸಾಧನೆ, ಅಲ್ಲಿನ ಪ್ರಾಧ್ಯಾಪಕರ ಹಾಗೂ ಇತರ ಸಿಬ್ಬಂದಿಗಳ ಸಾಧನೆ, ವಿದ್ಯಾರ್ಥಿ-ಶಿಕ್ಷಕರ ಪ್ರಮಾಣ, ಸಂಶೋಧನೆ ಗಾಗಿ ಪಿಎಚ್‌ಡಿ ಪಡೆದ ಪ್ರಾಧ್ಯಾಪಕರ ವಿವರ, ಅವರು ಮಂಡಿಸಿದ ಸಂಶೋಧನಾ ಪ್ರಬಂಧ, ವಿವಿಯಲ್ಲಿರುವ ವಿದೇಶಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದರು.
ರ್ಯಾಂಕಿಂಗ್ ಎಂಬುದು ನಮ್ಮ ಅಂತಿಮ ಗುರಿಯಲ್ಲ. ಇದೊಂದು ಪ್ರಯಾಣವೆಂದು ನಾವು ಭಾವಿಸುತ್ತೇವೆ. ರಾಷ್ಟ್ರೀಯ, ಏಶ್ಯನ್ ಹಾಗೂ ವಿಶ್ವ ಮಟ್ಟದಲ್ಲಿ ನಮ್ಮ ರ್ಯಾಂಕಿಂಗ್‌ನ್ನು ಉತ್ತಮ ಪಡಿಸಿಕೊಳ್ಳುವ ಪ್ರಯತ್ನ ಪ್ರತಿ ವರ್ಷ ನಡೆಯುತ್ತಿರುತ್ತದೆ. ಹಾಗೆಯೇ ಉಳಿದ ವಿವಿಗಳೊಂದಿಗೆ ನಮ್ಮ ವಿವಿಯನ್ನು ಹೋಲಿಸಿ ನೋಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ ಎಂದು ಡಾ.ವಿನೋದ್ ಭಟ್ ತಿಳಿಸಿದರು.
ವಿಶ್ವದಲ್ಲಿ ವಿವಿ ರ್ಯಾಂಕಿಂಗ್‌ನ ಹಲವು ಏಜೆನ್ಸಿಗಳಿವೆ. ನಾವು ಕ್ಯುಎಸ್, ಟೈಮ್ಸ್ ಹೈಯರ್ ಎಜ್ಯುಕೇಷನ್‌ನಲ್ಲಿದ್ದೇವೆ. ಏಕೆಂದರೆ ಇವುಗಳಿಗೆ ವಿಶ್ವದಲ್ಲಿ ಹೆಚ್ಚಿನ ವರು ಮಾನ್ಯತೆ ನೀಡಿದ್ದು, ಅವುಗಳ ರ್ಯಾಂಕಿಂಗ್‌ನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಕಾಮರ್ಸ್ ವಿಭಾಗದ ಮುಖ್ಯಸ್ಥ ಹಾಗೂ ಗುಣಮಟ್ಟದ ನಿರ್ದೇಶಕ ಡಾ.ಸಂದೀಪ್ ಶೆಣೈ, ಉಪನಿರ್ದೇಶಕ ಡಾ.ಕ್ರಿಸ್ಟೋಫರ್ ಸುಧಾಕರ ಉಪಸ್ಥಿತರಿದ್ದರು.
ಮಣಿಪಾಲ ವಿವಿ ಅಲ್ಲ ಮಾಹೆ
ಸುಪ್ರೀಂ ಕೋರ್ಟಿನ ಆದೇಶ ಹಾಗೂ ಯುಜಿಸಿಯ ನಿರ್ದೇಶನದಂತೆ ಇನ್ನು ಮುಂದೆ ಮಣಿಪಾಲ ವಿವಿ, ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಡೀಮ್ಡ್ ವಿವಿ ಎಂದು ಕರೆಸಿಕೊಳ್ಳುತ್ತದೆ ಎಂದು ಕುಲಪತಿ ಡಾ.ವಿನೋದ್ ಭಟ್ ತಿಳಿಸಿದರು.
ಮಾಹೆ ಡೀಮ್ಡ್ ವಿವಿ ಆಗಿದ್ದ ನಾವು 2006ರಲ್ಲಿ ಯುಜಿಸಿಯ ಅನುಮತಿ ಯಿಂದ ದೇಶದ ಉಳಿದ ಅನೇಕ ಖಾಸಗಿ ವಿವಿಗಳಂತೆ ಮಣಿಪಾಲ ವಿವಿ ಎಂದು ಬದಲಾಯಿಸಿಕೊಂಡಿ ದ್ದೆವು. 2008ರಲ್ಲಿ ಮತ್ತೆ ಅದನ್ನು ರದ್ದುಪಡಿಸಿದಾಗ, ಇದರ ವಿರುದ್ಧ ನಾವೂ ಹೈಕೋರ್ಟ್ ಮೆಟ್ಟಲೇರಿದ್ದೆವು. ಇದೇ ರೀತಿ ಉಳಿದ ವಿವಿಗಳೂ ಆಯಾ ರಾಜ್ಯಗಳಲ್ಲಿ ಕೋರ್ಟ್ ಕಟಕಟೆ ಹತ್ತಿದಾಗ, ಸುಪ್ರೀಂ ಕೋರ್ಟ್‌ಗಳನ್ನು ಇವುಗಳನ್ನೆಲ್ಲಾ ತನ್ನ ಸುಪರ್ದಿಗೆ ಪಡೆದು ಇಡೀ ದೇಶಕ್ಕೆ ಅನ್ವಯಿಸುವಂತೆ ಒಂದೇ ತೀರ್ಪನ್ನು ಇತ್ತೀಚೆಗೆ ನೀಡಿದೆ ಎಂದರು.







