ಯಮನ್: ಭೀಕರ ಕಾಳಗದಲ್ಲಿ ಮಾಜಿ ಅಧ್ಯಕ್ಷ ಸಲೇಹ್ ಮೃತ್ಯು?

ಸನಾ (ಯಮನ್), ಡಿ. 4: ಯಮನ್ ರಾಜಧಾನಿ ಸನಾದಲ್ಲಿ ನಡೆಯುತ್ತಿರುವ ಭೀಕರ ದಾಳಿಯಲ್ಲಿ ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಮೃತರಾಗಿದ್ದಾರೆ ಎಂದು ಹೌದಿ ಬಂಡುಕೋರರು ಸೋಮವಾರ ಹೇಳಿದ್ದಾರೆ.
ಸಲೇಹ್‌ಗೆ ನಿಷ್ಠರಾಗಿರುವ ಪಡೆಗಳು ಮತ್ತು ಇರಾನ್ ಬೆಂಬಲಿತ ಶಿಯಾ ಹೌದಿ ಬಂಡುಕೋರರ ನಡುವೆ ಸನಾ ನಗರದಲ್ಲಿ ಭೀಕರ ಕಾಳಗ ನಡೆಯುತ್ತಿದೆ. ಬಂಡುಕೋರರು ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ನಿಯಂತ್ರಣದಿಂದ ಸನಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಅದೇ ವೇಳೆ, ಈ ಪರಿಸ್ಥಿತಿಯ ಪ್ರಯೋಜನವನ್ನು ಪಡೆಯಲು ಮುಂದಾಗಿರುವ ಅಧ್ಯಕ್ಷ ಅಬೀದ್‌ರಬ್ಬೊ ಮನ್ಸೂರ್ ಹದಿ, ರಾಜಧಾನಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗುವಂತೆ ತನ್ನ ಪಡೆಗಳಿಗೆ ಆದೇಶಿಸಿದ್ದಾರೆ. ಹದಿ ಸರಕಾರಕ್ಕೆ ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟ ಬೆಂಬಲ ನೀಡುತ್ತಿದೆ.
ಮೂರು ದಶಕಗಳಿಗೂ ಅಧಿಕ ಕಾಲ ಯಮನನ್ನು ಆಳಿದ ಸಲೇಹ್ 2012ರಲ್ಲಿ ರಾಜೀನಾಮೆ ನೀಡಿದ್ದರು.
Next Story





