ಸಂವಿಧಾನ ವಿರೋಧಿ ಹೇಳಿಕೆ ಆರೋಪ: ಪೇಜಾವರ ಶ್ರೀ ವಿರುದ್ಧ ದಸಂಸ ಪ್ರತಿಭಟನೆ

ಮಂಗಳೂರು, ಡಿ. 4: ಉಡುಪಿ ಪೇಜಾವರ ಶ್ರೀ ಸ್ವಾಮೀಜಿಯವರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಸೋಮವಾರ ನಗರದ ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಮೆರವಣಿಗೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಅವರು, ದೇಶದ ಸಂವಿಧಾನ ಬದಲಾವಣೆಯಾಗಬೇಕೆಂದು ಸ್ವಾಮೀಜಿಯವರು ಹೇಳಿಕೆ ನೀಡಿರುವುದು ಖಂಡನೀಯ. ಇಂತಹ ಸ್ವಾಮೀಜಿ ದೇಶಕ್ಕೆ ಅಪಾಯಕಾರಿಯಾಗಿದ್ದಾರೆ ಎಂದರು.
ಪೇಜಾವರ ಶ್ರೀ ಅವರು ದಲಿತ ಕಾಲನಿಗಳಿಗೆ ಭೇಟಿ ನೀಡಿದ್ದ ಸಂದರ್ಭ ದಲಿತರು ಅವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದರು. ಆದರೆ, ಒಂದೆಡೆ ದಲಿತ ಕಾಲನಿಗೆ ಭೇಟಿ ನೀಡಿ ಮತ್ತೊಂದೆಗೆ ದೇಶದ ಸಂವಿಧಾನವನ್ನು ಅಂಬೇಡ್ಕಲ್ ಒಬ್ಬರೇ ರಚಿಸಿದ್ದಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಮಾತ್ರವಲ್ಲದೆ ಸಂವಿಧಾನವನ್ನು ಬದಲಾಯಿಸಬೇಕೆಂಬ ಹೇಳಿಕೆ ನೀಡಿರುವುದು ದಲಿತರ ಬಗ್ಗೆ ಸ್ವಾಮೀಜಿಗಿರುವ ನಿಲುವು ಸ್ಪಷ್ಟವಾಗುತ್ತದೆ ಎಂದು ದೇವದಾಸ್ ಹೇಳಿದರು.
ಅಶೋಕ್ ಕೊಂಚಾಡಿ ಮಾತನಾಡಿ, ಸಂವಿಧಾನ ಬದಲು ವಿಚಾರ ಇಂದು ನಿನ್ನೆಯದ್ದಲ್ಲ. ಹಿಂದೆ ಸಂವಿಧಾನ ಪರಾಮರ್ಶೆ ಆಗಬೇಕೆಂಬ ವಿಚಾರ ಬಂದಾಗ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಸಂವಿಧಾನ ರಚಿಸಿದವರು ದಲಿತ ವರ್ಗಕ್ಕೆ ಸೇರಿದವರು ಎಂಬ ಉದ್ದೇಶ ಇದರಲ್ಲಿ ಅಡಗಿದೆ ಎಂದವರು ಹೇಳಿದರು.
ಪ್ರತಿಭಟನೆಯಲ್ಲಿ ರಘು ಎಕ್ಕಾರು, ಸಂತೋಷ್ ಬಜಾಲ್, ಭಾಸ್ಕರ, ಸರೋಜಿನಿ, ಭಾನುಕೊಂಡ, ಲಕ್ಷ್ಮಣ್ ಕಾಂಚನ್, ರುಕ್ಮಯ ಕಟೀಲ್, ಚಂದ್ರ ಕುಮಾರ್, ವಿಶು ಕುಮಾರ್, ಕೃಷ್ಣಾನಂದ ಉಪಸ್ಥಿತರಿದ್ದರು.







