ಸ್ವಕ್ಷೇತ್ರದಲ್ಲೇ ಸಿಎಂ ಕುರ್ಚಿ ಅಲುಗಾಡುತ್ತಿದೆ: ಸಂಸದೆ ಶೋಭಾ ಕರಂದ್ಲಾಜೆ

ಮೈಸೂರು,ಡಿ.4: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲೇ ಸಿಎಂ ಕುರ್ಚಿ ಅಲುಗಾಡುತ್ತಿದೆ. ವರುಣಾ ಕ್ಷೇತ್ರನಾ, ಚಾಮುಂಡೇಶ್ವರಿ ಕ್ಷೇತ್ರನಾ, ಎಂದು ಯೋಚನೆಯಲ್ಲಿದ್ದಾರೆ. ಅದಕ್ಕೆ ಮೈಸೂರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದ ಗಾಂಧಿವೃತ್ತದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿ ಆಚರಣೆ ವೇಳೆ ನಿನ್ನೆ ಹುಣಸೂರಿನಲ್ಲಿ ನಡೆದ ಘಟನೆಗೆ ರಾಜ್ಯ ಸರ್ಕಾರವೇ ಕಾರಣ. ಹನುಮ ಜಯಂತಿ ಆಚರಣೆಗೆ ಬಂದಿದ್ದವರು. ಮಾಲೆ, ಶಲ್ಯ, ಧ್ವಜ ಹಿಡಿದುಕೊಂಡಿದ್ದ ಯುವಕರು, ಮಕ್ಕಳು, ವೃದ್ಧರು ಬಂದಿದ್ದರು. ಅವರು ಬಂದೂಕು, ತಲ್ವಾರ್ ಹಿಡಿದುಕೊಂಡು ಬಂದಿದ್ದರಾ ಅವರ ಮೇಲೆ ಲಾಠಿ ಚಾರ್ಚ್ ಮಾಡಿಸುವುದಕ್ಕೆ? ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿ ಚಾರ್ಚ್ ಮಾಡಿಸಿ 59 ಮಂದಿ ಅಮಾಯಕರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದೀರಿ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಹುಣಸೂರಿನಲ್ಲಿ ಶಾಂತಿಯುತವಾಗಿ ನಡೆದುಕೊಂಡು ಬಂದಿದ್ದ ಹನುಮ ಜಯಂತಿ ಆಚರಣೆಯಲ್ಲಿ ತಾವು ಗೊಂದಲ, ಸಂಘರ್ಷ ಉಂಟು ಮಾಡಿದ್ದೀರಿ. ಹುಣಸೂರು ಏನು ಪಾಕಿಸ್ತಾನ ಅಲ್ಲ. ಹನುಮ ಜಯಂತಿ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕು. ನಮಗೆ ರಕ್ಷಣೆ ಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ನಗರ ಬಿಜೆಪಿ ಅಧ್ಯಕ್ಷ ಡಾ.ಮಂಜುನಾಥ್, ವಿ.ಫಣೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







