ಗೇರುಕಟ್ಟೆ: ತಂಡದಿಂದ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಬೆಳ್ತಂಗಡಿ, ಡಿ.4: ಹಳೆಯ ದ್ವೇಷದಿಂದ ತಂಡವೊಂದು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗೇರುಕಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ.
ಗೇರುಕಟ್ಟೆ ನಿವಾಸಿಗಳಾದ ತಸ್ಲೀಂ, ಹಾರಿಸ್ ಹಾಗೂ ಶಿಹಾಬ್ ಗಾಯಗೊಂಡವರು. ತಸ್ಲೀಮ್ ಹಾಗೂ ಹಾರಿಸ್ ಸಹೋದರರಾಗಿದ್ದು ಇವರು ಗೇರುಕಟ್ಟೆ ಬಸ್ ತಂಗುದಾಣದ ಸಮೀಪದ ಅಂಗಡಿಯೊಂದರಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ತಂಡ ತಸ್ಲೀಮ್, ಸಮೀಪದಲ್ಲೇ ಇದ್ದ ಹಾರಿಸ್ ಹಾಗು ಶಿಹಾಬ್ ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.
ಗಾಯಗೊಂಡ ಮೂವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಸ್ಲೀಮ್ ನ ತಲೆ, ಮುಖಕ್ಕೆ ಗಂಭೀರ ಗಾಯಗಳಾದ್ದು, ಹಾರಿಸ್ ನ ತಲೆ ಹಾಗೂ ಕಾಲಿಗೆ ಗಾಯವಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಇಲ್ಲಿನ ನಿವಾಸಿಗಳಾದ ಯಾಕುಬ್, ಉಮರಬ್ಬ, ರವೂಫ್, ಇರ್ಫಾನ್, ರಿಝ್ವಾನ್, ಅಬೂಬಕರ್, ಆದಂ ಶಾಫಿ, ಹೈದರ್ ಹಾಗೂ ಇತರರ ತಂಡ ಹಲ್ಲೆ ನಡೆಸಿರುವುದಾಗಿ ಗಾಯಗೊಂಡವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







