ಉ.ಪ್ರ: 8 ತಿಂಗಳಲ್ಲಿ ಬಿಜೆಪಿ ಮತಗಳಿಕೆ ಶೇ.12ರಷ್ಟು ಕುಸಿತ

ಲಕ್ನೋ,ಡಿ.3: ಕಳೆದ ವಾರ ನಡೆದ ಉತ್ತರಪ್ರದೇಶದ ಪೌರಾಡಳಿತ ಸಂಸ್ಥೆಗಳ ಅಧ್ಯಕ್ಷರ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು 16 ನಗರಪಾಲಿಕೆಗಳ ಪೈಕಿ 14ರಲ್ಲಿ ಗೆಲುವುಸಾಧಿಸಿದ್ದರೂ, ನಗರಪಂಚಾಯತ್ ಹಾಗೂ ಮುನ್ಸಿಪಲ್ ಮಂಡಳಿಗಳಲ್ಲಿ ಅದರ ಸಾಧನೆ ತೀರಾ ಕಳಪೆಯಾಗಿದೆ.
ಮಹಾನಗರಪಾಲಿಕೆ, ನಗರಪಂಚಾಯತ್ ಮತ್ತು ್ಖನಗರಪಾಲಿಕೆ ಪರಿಷತ್ ( ಮುನ್ಸಿಪಲ್ ಮಂಡಳಿ)ಗಳ ಮುಖ್ಯಸ್ಥರ ಹುದ್ದೆಗಳಿಗಾಗಿ ಚುನಾವಣೆ ನಡೆದ ಒಟ್ಟು 652 ಸ್ಥಾನಗಳ ಪೈಕಿ ಬಿಜೆಪಿಗೆ ಕೇವಲ ಶೇ.30ರಷ್ಟು ಸ್ಥಾನಗಳನ್ನು ಮಾತ್ರವೇ ಸಾಧ್ಯವಾಗಿದೆ. ಕೇವಲ 8 ತಿಂಗಳುಗಳ ಹಿಂದೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 325 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಸ್ಥಳೀಯಾಡಳಿತ ಸಂಸ್ಥೆಯ ನಗರಪಂಚಾಯತ್ ಹಾಗೂ ಮುನ್ಸಿಪಲ್ ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಈ ಚುನಾವಣೆಯಲ್ಲಿ ಅದರ ಮತಗಳಿಕೆ ಪ್ರಮಾಣವು ಶೇ.12ರಷ್ಟು ಕುಸಿದಿದೆ.
ಒಟ್ಟು 652 ಸ್ಥಾನಗಳ ಪೈಕಿ 225 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷೇತರರು ಅತಿದೊಡ್ಡ ಗುಂಪಾಗಿ ಹೊರಹೊಮ್ಮಿದ್ದಾರೆ. 184 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಎರಡನೆ ಸ್ಥಾನದಲ್ಲಿದೆ. ಸಮಾಜವಾದಿ ಪಕ್ಷವು 128 ಸ್ಥಾನಗಳಲ್ಲಿ ವಿಜಯಗಳಿಸಿದ್ದು ಮೂರನೆ ಸ್ಥಾನದಲ್ಲಿದೆ. 76 ಸ್ಥಾನಗಳನ್ನು ಪಡೆದಿರುವ ಬಿಎಸ್ಪಿ ನಾಲ್ಕನೆ ಸ್ಥಾನದಲ್ಲಿದೆ.
ಆದರೆ ಮೇಯರ್ ಚುನಾವಣೆಯಲ್ಲಿ ಬಿಎಸ್ಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೊದಲು ಬಿಜೆಪಿ ಕಸಿದುಕೊಂಡಿದ್ದ ನಗರಪ್ರದೇಶದ ದಲಿತಮತದಾರರನ್ನು ಮತ್ತೆ ತನ್ನೆಡೆಗೆ ಸೆಳೆಯುವಲ್ಲಿ ಬಿಎಸ್ಪಿ ಯಶಸ್ವಿಯಾಗಿದೆ.
ಉತ್ತರಪ್ರದೇಶದ 22 ಕೋಟಿ ಮತದಾರರ ಪೈಕಿ 8 ಕೋಟಿ ಮಂದಿ ಮೂರು ಸ್ತರದ ನಗರ-ಪಟ್ಟಣ ಆಡಳಿತಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದರು.ಈ ಚುನಾವಣೆಯಲ್ಲಿ ಒಟ್ಟು 4 ಕೋಟಿ ಮಂದಿ ಅಂದರೆ ಶೇ.52.4 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು. 438 ನಗರ ಪಂಚಾಯತ್‌ಗಳಿಗೆ 2.65 ಕೋಟಿ ಮಂದಿ, 16 ಮಹಾನಗರಪಾಲಿಕೆಗಳಿಗೆ 35 ಲಕ್ಷ ಮಂದಿ ಹಾಗೂ 1 ಕೋಟಿ ಮಂದಿ ಹಾಗೂ 198 ಪುರಸಭೆಗಳಿಗೆ 198 ಮಂದಿ ಮತದಾನ ಮಾಡಿದ್ದರು.
ಮೇಯರ್ ಚುನಾವಣೆಗಳಲ್ಲಿ ಬಿಜೆಪಿಗೆ 87 ಶೇ. ಮತಗಳು ದೊರೆತರೆ, 12.5 ಶೇಕಡ ಮತಗಳೊಂದಿಗೆ ಬಿಎಸ್ಪಿ ದ್ವಿತೀಯ ಸ್ಥಾನದಲ್ಲಿದೆ.
ನಗರಪಾಲಿಕಾ ಪರಿಷತ್ ( ಮುನ್ಸಿಪಲ್ ಮಂಡಳಿ) ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ 35.5 ಶೇಕಡ ಮತಗಳನ್ನು ಪಡೆದು 70 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಸ್ಪಿಗೆ 22.4 ಶೇಕಡ, ಬಿಎಸ್ಪಿ 14.65 ಶೇ. ಹಾಗೂ ಕಾಂಗ್ರೆಸ್ 4.5 ಶೇ. ಮತ್ತು ಪಕ್ಷೇತರರು 21.72 ಶೇ. ಮತಗಳನ್ನು ಪಡೆದಿದ್ದಾರೆ.
ನಗರಪಂಚಾಯತ್ ಚುನಾವಣೆಗಳಲ್ಲಿ 2.65 ಕೋಟಿ ಮತಗಳು ಚಲಾವಣೆಯಾಗಿದ್ದು, ಒಟ್ಟು 438 ಸ್ಥಾನಗಳ ಪೈಕಿ ಬಿಜೆಪಿ 100 ಸ್ಥಾನಗಳಲ್ಲಿ ಗೆಲುವು ಕಂಡಿದ್ದು, ಕೇವಲ ಶೇ.22ರಷ್ಟು ಮತಗಳನ್ನು ಗಳಿಸಿದೆ. ಪಕ್ಷೇತರರು 41.55 ಶೇಕಡ ಮತ ಗಳಿಸಿದ್ದಾರೆ. ಎಸ್ಪಿ ಶೇ.18.95 ಮತಗಳನ್ನು ಬಾಚಿಕೊಂಡಿದ್ದರೆ, ಬಿಎಸ್ಪಿಗೆ 20.7 ಶೇಕಡ ಮತಗಳು ಲಭಿಸಿವೆ. ಕಾಂಗ್ರೆಸ್ ಮತಗಳಿಕೆಯ ಪ್ರಮಾಣ ಕೇವಲ ಶೇ.3.88 ಆಗಿದೆ.
ಹೀಗೆ ಚಲಾವಣೆಯಾದ ಒಟ್ಟು 1.23 ಕೋಟಿ ಮತಗಳ ಪೈಕಿ ಬಿಜೆಪಿಗೆ ಕೇವಲ ಶೇ.30ರಷ್ಟು ಮತಗಳು ಮಾತ್ರವೇ ದೊರೆತಿವೆ. 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೇ. 42ರಷ್ಟು ಮತಗಳು ದೊರೆತಿದ್ದವು. ಆದರೆ ಈಗ ಅದರ ಮತಗಳಿಕೆ ಪ್ರಮಾಣವು ಶೇ.30ಕ್ಕೆ ಕುಸಿದಿದೆ.







