ಪ್ರಧಾನಿಯಿಂದ ಲೋಕಪಾಲ ದುರ್ಬಲ: ಅಣ್ಣಾ ಹಝಾರೆ

ಖಜುರಾಹೋ (ಮ.ಪ್ರ.),ಡಿ.4: ಭ್ರಷ್ಟಾಚಾರ ವಿರೋಧಿ ಲೋಕಪಾಲ ವಿಧೇಯಕವನ್ನು ಕೇಂದ್ರದ ಮೋದಿ ಸರಕಾರವು ದುರ್ಬಲಗೊಳಿಸಿದೆಯೆಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಆರೋಪಿಸಿದ್ದಾರೆ.
ರವಿವಾರ ಸಂಜೆ ಮಧ್ಯಪ್ರದೇಶದ ಖಜುರಾಹೋದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದಅವರು, ಕಳೆದ ವರ್ಷದ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ, ಲೋಕಪಾಲ ಮಸೂದೆಗೆ ತಿದ್ದುಪಡಿ ತರುವ ಮೂಲಕ, ಸರಕಾರಿ ಅಧಿಕಾರಿಗಳ ಕುಟುಂಬಿಕರು ತಮ್ಮ ಆಸ್ತಿಗಳ ವಿವರಗಳನ್ನು ಪ್ರತಿ ವರ್ಷ ಬಹಿರಂಗಪಡಿಸದೆ ಇರು ವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆ ಮೂಲಕ ಅವರು ಲೋಕಪಾಲ ಮಸೂದೆಯನ್ನು ಇನ್ನಷ್ಟು ದುರ್ಬಲಗೊಳಿಸಿದ್ದಾರೆಂದು ಆರೋಪಿಸಿದರು.
ನೀರಿನ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾದ ಮೂರು ದಿನಗಳ ‘ಜಲಸಮ್ಮೇಳನ’ದಲ್ಲಿ ಪಾಲ್ಗೊಳ್ಳಲು ಹಝಾರೆ ಖಜುರಾಹೋಗೆ ಆಗಮಿಸಿದ್ದಾರೆ. ‘‘ಮೂಲ ಲೋಕಪಾಲ ವಿಧೇಯಕದ ಪ್ರಕಾರ ಸರಕಾರಿ ಅಧಿಕಾರಿಗಳ ಕುಟುಂಬ ಸದಸ್ಯರೂ ತಮ್ಮ ಆಸ್ತಿಯ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ’’ ಎಂದು ಹಝಾರೆ ತಿಳಿಸಿದ್ದಾರೆ.
ತಿದ್ದುಪಡಿಗೊಂಡ ವಿಧೇಯಕವನ್ನು ಯಾವುದೇ ಚರ್ಚೆಯನ್ನು ನಡೆಸದೆ ಕೇವಲ ಒಂದೇ ದಿನದಲ್ಲಿ ಲೋಕಸಭೆಯಲ್ಲಿ ಆಂಗೀಕರಿಸಲಾಗಿತ್ತು. ಕಳೆದ ವರ್ಷದ ಜುಲೈ 28ರಂದು ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಜುಲೈ 29ರಂದು ಅದನ್ನು ರಾಷ್ಟ್ರಪತಿಯ ಸಹಿಗೆ ಕಳುಹಿಸಿಕೊಡಲಾಗಿತ್ತು. ಹೀಗೆ ಕೇವಲ ಮೂರು ದಿನಗಳಲ್ಲಿ ಲೋಕಪಾಲ ಕಾನೂನು ದುರ್ಬಲಗೊಂಡಿತೆಂದು ಹಝಾರೆ ನೋವು ವ್ಯಕ್ತಪಡಿಸಿದರು.
ಲೋಕಪಾಲ ಮಸೂದೆಯನ್ನು ಬಲಪಡಿಸಲು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಮಾರ್ಚ್23ರಿಂದ ದಿಲ್ಲಿಯಲ್ಲಿ ಪ್ರತಿಭಟನೆ ನಡೆ ಸುವುದಾಗಿ ಹಝಾರೆ ಹೇಳಿದ್ದಾರೆ. ವಿವಿಧ ಸಮಸ್ಯೆಗಳ ಕುರಿತಾಗಿ ತಾನು ಪ್ರಧಾನಿಗೆ ಪತ್ರ ಬರೆದಿದ್ದರೂ, ಅವರಿಂದ ಯಾವುದೇ ಉತ್ತರ ಬಂದಿಲ್ಲವೆಂದು ಹಝಾರೆ ತಿಳಿಸಿದರು. 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ರೈತರಿಗೆ 5 ಸಾವಿರ ರೂ.ಗಳ ಮಾಸಿಕ ಪಿಂಚಣಿ ನೀಡಬೇಕೆಂದು ಹಝಾರೆ ಆಗ್ರಹಿಸಿದರು.







