ದೇಶವಿರೋಧಿ ಹೇಳಿಕೆ ನೀಡಿದ ಧರ್ಮಗುರುವಿನ ತಲೆಗೆ 10 ಲಕ್ಷ ರೂ. ಘೋಷಿಸಿದ ಬಿಜೆಪಿ ಯುವ ಮೋರ್ಚಾ ನಾಯಕ

ಬಾಗಲಕೋಟೆ, ಡಿ.4: ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಮಸೀದಿಯೊಂದರ ಧರ್ಮಗುರುವೊಬ್ಬರ ತಲೆ ಕಡಿಯುವವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಹೇಳಿದ್ದು, ವಿವಾದವನ್ನು ಸೃಷ್ಟಿಸಿದೆ.
ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಸವರಾಜ ಯಂಕಂಚಿ, “ಹುಬ್ಬಳ್ಳಿಯನ್ನು ಪಾಕಿಸ್ತಾನಕ್ಕೆ ಹೋಲಿಸಿರುವ ಮೌಲ್ವಿ ಈ ದೇಶದಲ್ಲಿರಲು ಅರ್ಹತೆ ಹೊಂದಿಲ್ಲ. ಮೌಲ್ವಿ ತಲೆ ಕಡಿದವರಿಗೆ ಹತ್ತು ಲಕ್ಷ ರೂ. ಬಹುಮಾನವನ್ನು ಯುವ ಮೋರ್ಚಾದಿಂದ ನೀಡಲಾಗುತ್ತದೆ” ಎಂದು ಹೇಳಿದರು.
“ಪಾಕಿಸ್ತಾನ ನೋಡಬೇಕೆಂದರೆ, ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ” ಎಂದು ಅಬ್ದುಲ್ ಹಮೀದ್ ಖೈರಾತಿ ಎಂಬವರು ಹೇಳಿಕೆ ನೀಡಿದ್ದ ವಿಡಿಯೊ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿತ್ತು.
ನಾನು ಭಾರತೀಯ, ಕ್ಷಮೆ ಕೋರುವೆ
“ಗಣೇಶಪೇಟೆ ಪಾಕಿಸ್ತಾನದಂತೆ ಕಾಣುತ್ತಿದೆ ಎಂದಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಾನು ಎಂದಿಗೂ ಭಾರತೀಯ, ನನ್ನ ಹೇಳಿಕೆಯನ್ನು ತಿರುಚಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ”.
-ಅಬ್ದುಲ್ ಹಮೀದ್ ಖೈರಾತಿ







