ಬಾಬಾ ಬುಡನ್‌ಗಿರಿ ಗೋರಿಗಳಿಗೆ ಹಾನಿ ರಾಜ್ಯ ಸರಕಾರದ ನಿರ್ಲಕ್ಷ್ಯ ಕಾರಣ: ರಿಯಾಝ್ ಫರಂಗಿಪೇಟೆ

ಮಂಗಳೂರು, ಡಿ. 4: ಬಾಬಾ ಬುಡನ್‌ಗಿರಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಗೋರಿಗಳಿಗೆ ಹಾನಿಗೊಳಿಸಿರುವುದಕ್ಕೆ ರಾಜ್ಯ ಸರಕಾರದ ನಿರ್ಲಕ್ಷವೇ ಕಾರಣ ಎಂದು ಎಸ್‌ಡಿಪಿಐ ರಾಜ್ಯ ಕಾಯದರ್ಶಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.
ಚಿಕ್ಕಮಗಳೂರಿನ ಬಾಬಾಬುಡಾನ್‌ಗಿರಿ ನಿಷೇಧಿತ ಪ್ರದೇಶಕ್ಕೆ ನುಗ್ಗಿ ಗೋರಿಗಳಿಗೆ ಹಾನಿಗೊಳಿಸಿರುವುದನ್ನು ವಿರೋಧಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯ ನಗರದ ಮಿನಿವಿಧಾನಸೌದ ಎದುರು ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿರು.
ಗಿರಿಯನ್ನು ಧ್ವಂಸ ಮಾಡುತ್ತೇವೆ ಎಂದು ಸಂಘಪರಿವಾರದವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇವರ ಈ ಬಹಿರಂಗ ಹೇಳಿಕೆಯ ವಿರುದ್ಧ ಎಸ್‌ಡಿಪಿಐ ಚಿಕ್ಕಮಗಳೂರಿನಲ್ಲಿ ರ್ಯಾಲಿ ನಡೆಸಲು ಉದ್ದೇಶಿಸಿತ್ತು. ಆದರೆ, ಕೆಲವು ಜನಪ್ರತಿನಿಧಿಗಳು ಹಾಗೂ ಪೊಲೀಸರ ಮನವಿಯ ಮೇರೆಗೆ ರ್ಯಾಲಿಯನ್ನು ಹಿಂಪಡೆದುಕೊಂಡಿದ್ದೆವು. ಗಿರಿಯನ್ನು ಹಾನಿಗೊಳಿಸಿದ ಆರೋಪಿಗಳನ್ನು ಸರಕಾರ ಶೀಘ್ರ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಿಯಾಝ್ ಫರಂಗಿಪೇಟೆ ಆಗ್ರಹಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವಾಗಲೇ ಸಂಘಪರಿವಾರದ ಕಾರ್ಯಕರ್ತರು ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿದರು. ಇದೀಗ ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಸಂಘಪರಿವಾರದವರು ಗಿರಿಯನ್ನು ಹಾನಿಗೊಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಸ್ಲಿಮರು ಹೆಚ್ಚಿನ ನಿರೀಕ್ಷೆಯನ್ನಿಟ್ಟು ಕೊಂಡಿದ್ದರು ಎಂದವರು ಹೇಳಿದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕೆ., ಎಸ್‌ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಐ.ಎಂ.ಆರ್. ಉಪಸ್ಥಿತರಿದ್ದರು. ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಅತಾವುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾರಿಸ್ ಮಲಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







