ತೊಕ್ಕೊಟ್ಟು: ಗ್ರಾಮಾಂತರ ರಿಕ್ಷಾ ಚಾಲಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಭೆ

ಉಳ್ಳಾಲ, ಡಿ. 4: ಗ್ರಾಮಾಂತರ ರಿಕ್ಷಾ ಚಾಲಕರಿಗೆ ರಕ್ಷಣೆಯಾಗಿ ತುಳುನಾಡ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿರುತ್ತದೆ. ನಮಗೆ ನಗರ ಪ್ರದೇಶದ ರಿಕ್ಷಾ ಚಾಲಕರ ಮೇಲೆ ಯಾವುದೇ ದ್ವೇಷವಿಲ್ಲ, ಆದರೆ ಬಡ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಅವರು ಹೇಳಿದರು.
ಅವರು ತೊಕ್ಕೊಟ್ಟುವಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರದ ಅಧ್ಯಕ್ಷ ಸಿರಾಜ್ ಅಡ್ಕರೆಯವರ ನೇತೃತ್ವದಲ್ಲಿ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಮಂಗಳೂರು ನಗರ ಪ್ರವೇಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಗ್ರಾಮಾಂತರ ರಿಕ್ಷಾ ಚಾಲಕರು ಅಗತ್ಯ ಕೆಲಸಗಳಿಗಾಗಿ, ಗ್ಯಾಸ್ ಹಾಕಿಸಲು, ರೋಗಿಗಳನ್ನು ಕರೆತರಲು ಮಂಗಳೂರಿಗೆ ಆಗಮಿಸಿದರೆ ಅವರ ಮೇಲೆ ದಂಡ ವಿಧಿಸುತ್ತಿರು ವುದು ಅಕ್ಷಮ್ಯವಾಗಿದೆ. ಮುಂದಿನ ಒಂದು ವಾರದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತು.ರ.ವೇ ನೇತೃತ್ವದಲ್ಲಿ ಆರ್.ಟಿ.ಒ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ತು.ರ.ವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಂ ಸಿರಾಜ್ ಅಡ್ಕರೆ ಮಾತನಾಡಿ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸ ಬೇಕಾದ ಸಂಬಂಧಪಟ್ಟವರು ನಗರ ಹಾಗೂ ಗ್ರಾಮೀಣ ಪ್ರದೇಶದ ರಿಕ್ಷಾ ಚಾಲಕರಿಗೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಲತಾಯಿ ಧೋರಣೆಯನ್ನು ಮಾಡುತ್ತಿರುವುದು ಆಕ್ಷಮ್ಯವಾಗಿದೆ. ಗ್ರಾಮಾಂತರ ರಿಕ್ಷಾ ಚಾಲಕರಿಗೆ ಅನ್ಯಾಯವಾದರೆ ಸುಮ್ಮನಿರಲು ನಾವು ತಯಾರಿಲ್ಲ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ರಹೀಂ ಕುತ್ತಾರ್, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ.ಯು ಜೋಗಿ, ಯುವ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಶೆಟ್ಟಿ, ಜಿಲ್ಲಾ ಮಹಿಳಾ ಸಂಚಾಲಕಿ ರೇಷ್ಮಾ ಉಳ್ಳಾಲ್, ಶಿವು ಶೆಟ್ಟಿ, ನಾಗೇಶ್ ಶೆಟ್ಟಿ, ಅಬ್ದುಲ್ ರಹಿಮಾನ್ ಉಳ್ಳಾಲ್, ಅಬುಸಾಲಿ ಉಳ್ಳಾಲ್, ಜಮಾಲ್ ಕುತ್ತಾರ್, ಗಂಗಾಧರ್ ಅತ್ತಾವರ್ ಹಾಗೂ ರಿಕ್ಷಾ ಚಾಲಕ ಮತ್ತು ಮಾಲಕ ಘಟಕದ ಪ್ರಮುಖರು ಉಪಸ್ಥಿತರಿದ್ದರು.







