ಆಸ್ಟ್ರೇಲಿಯಕ್ಕೆ 268 ರನ್ ಮುನ್ನಡೆ

ಅಡಿಲೇಡ್, ಡಿ.4: ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವೆ ಇಲ್ಲಿ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದೆ.
ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗೆ ನಿಯಂತ್ರಿಸಿದ ಆಸ್ಟ್ರೇಲಿಯ 215 ರನ್ ಮುನ್ನಡೆ ಪಡೆಯಿತು. ಆಂಗ್ಲರಿಗೆ ಫಾಲೋ-ಆನ್ ವಿಧಿಸದೇ ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಮೂರನೇ ದಿನದಾಟದಂತ್ಯಕ್ಕೆ 53 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಒಟ್ಟು 268 ರನ್ ಮುನ್ನಡೆಯಲ್ಲಿದೆ. ಜೇಮ್ಸ್ ಆ್ಯಂಡರ್ಸನ್(2-16) ಹಾಗೂ ಕ್ರಿಸ್ ವೋಕ್ಸ್(2-13)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಆಸೀಸ್‌ಗೆ ನಡುಕ ಹುಟ್ಟಿಸಿದ್ದಾರೆ.
ಆರಂಭಿಕ ಆಟಗಾರರಾದ ಬ್ಯಾಂಕ್ರಾಫ್ಟ್(4) ಹಾಗೂ ಡೇವಿಡ್ ವಾರ್ನರ್(14)39 ರನ್‌ಗೆ ಪೆವಿಲಿಯನ್‌ಗೆ ವಾಪಸಾದರು. ಉಸ್ಮಾನ್ ಖ್ವಾಜಾ(20) ಹಾಗೂ ಸ್ಟೀವನ್ ಸ್ಮಿತ್(6) ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ. ಪೀಟರ್ ಹ್ಯಾಂಡ್ಸ್‌ಕಂಬ್(ಅಜೇಯ 3) ಹಾಗೂ ನಥಾನ್ ಲಿಯೊನ್(ಅಜೇಯ 3) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ 227: ಇದಕ್ಕೆ ಮೊದಲು 1 ವಿಕೆಟ್‌ಗಳ ನಷ್ಟಕ್ಕೆ 29 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯ 227 ರನ್‌ಗೆ ನಿಯಂತ್ರಿಸಿತು.
ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದ ಯಾವೊಬ್ಬ ದಾಂಡಿಗನೂ ಅರ್ಧಶತಕ ದಾಖಲಿಸಿಲ್ಲ. ಚೊಚ್ಚಲ ಪಂದ್ಯವನ್ನಾಡಿದ್ದ ಕ್ರೆಗ್ ಓವರ್ಟನ್(ಅಜೇಯ 41) ಅಗ್ರ ಸ್ಕೋರರ್ ಎನಿಸಿಕೊಂಡರು.
ಆರಂಭಿಕ ಆಟಗಾರ ಅಲಿಸ್ಟರ್‌ಕುಕ್(37), ಕ್ರಿಸ್ ವೋಕ್ಸ್(36), ಮೊಯಿನ್ ಅಲಿ(25), ಜಾನಿ ಬೈರ್‌ಸ್ಟೊವ್(21),ಡೇವಿಡ್ ಮಲಾನ್(19) ಹಾಗೂ ಸ್ಟೋನ್‌ಮನ್(18) ಎರಡಂಕೆಯ ಸ್ಕೋರ್ ದಾಖಲಿಸಿದ್ದಾರೆ. ಆಸ್ಟ್ರೇಲಿಯದ ಪರ ಸ್ಪಿನ್ನರ್ ನಥಾನ್ ಲಿಯೊನ್ ಯಶಸ್ವಿ ಬೌಲರ್(4-60) ಎನಿಸಿಕೊಂಡರು. ಮಿಚೆಲ್ ಸ್ಟಾರ್ಕ್(3-49) ಹಾಗೂ ಕಮ್ಮಿನ್ಸ್(2-47) ಐದು ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
►ಆಸ್ಟ್ರೇಲಿಯ ಮೊದಲ ಇನಿಂಗ್ಸ್: 442
►ಇಂಗ್ಲೆಂಡ್ ಮೊದಲ ಇನಿಂಗ್ಸ್: 227
(ಒವರ್ಟನ್ ಅಜೇಯ 41, ಕುಕ್ 37,ಮೊಯಿನ್ ಅಲಿ 25, ಲಿಯೊನ್ 4-60, ಸ್ಟಾರ್ಕ್ 3-49, ಕಮಿನ್ಸ್ 2-47)
►ಆಸ್ಟ್ರೇಲಿಯ ಎರಡನೇ ಇನಿಂಗ್ಸ್:53/4
(ಉಸ್ಮಾನ್ ಖ್ವಾಜಾ 20,ಆ್ಯಂಡರ್ಸನ್ 2-16, ವೋಕ್ಸ್ 2-13)
ರಬಾಡ ದಾಖಲೆ ಹಿಂದಿಕ್ಕಿದ ಲಿಯೊನ್
ಶ್ರೇಷ್ಠ ಫಾರ್ಮ್ ಮುಂದುವರಿಸಿದ ನಥಾನ್ ಲಿಯೊನ್ 2017ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 55 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ದಕ್ಷಿಣ ಆಫ್ರಿಕದ ಕಾಗಿಸೊ ರಬಾಡ ದಾಖಲೆಯನ್ನು ಹಿಂದಿಕ್ಕಿದರು.
ಲಿಯೊನ್, ರಬಾಡ ಬಳಿಕ ಆರ್.ಅಶ್ವಿನ್(52), ರಂಗನಾ ಹೆರಾತ್(52), ರವೀಂದ್ರ ಜಡೇಜ(50), ಕೇಶವ್ ಮಹಾರಾಜ್(43) ಹಾಗೂ ಯಾಸಿರ್ ಶಾ(43) ಅವರಿದ್ದಾರೆ. ಈ ವರ್ಷ ಸ್ಪಿನ್ನರ್‌ಗಳೇ ಪ್ರಾಬಲ್ಯ ಮರೆದಿರುವುದು ವಿಶೇಷ. ಪ್ರಸ್ತುತ ಲಿಯೊನ್ 71 ಟೆಸ್ಟ್‌ಗಳಲ್ಲಿ ಒಟ್ಟು 278 ವಿಕೆಟ್‌ಗಳನ್ನು ಕಬಳಿಸಿದ್ದಾರೆ.







