ಪೇಜಾವರ ಶ್ರೀ, ಗೋ.ಮಧುಸೂದನ್ ಗಡಿಪಾರಿಗೆ ಒತ್ತಾಯಿಸಿ ಧರಣಿ

ಮಂಡ್ಯ,ಡಿ.4: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ದೃಶ್ಯ ಮಾದ್ಯಮದಲ್ಲಿ ಸಂವಿಧಾನ ಬಗ್ಗೆ ಹಗುರವಾಗಿ ಮಾತಾನಾಡಿರುವ ಪೇಜಾವರ ಶ್ರೀ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಧರಣಿ ಮಾಡಿದರು.
ಇದೇ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರು ಪೇಜಾವರ ಶ್ರೀ ಹಾಗೂ ಗೋ. ಮಧುಸೂದನ್ ಭಾವಚಿತ್ರಹಿಡಿದು, ಅವರ ವಿರುದ್ಧ ಘೋಷಣೆಗಳನ್ನುಕೂಗಿ, ಅವರರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕೆಂದು ಎಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಸದಸ್ಯ ಕಬ್ಬಾಳಯ್ಯ ಮಾತಾನಾಡಿ, ಬಿ.ಜೆ.ಪಿ. ವಕ್ತಾರ ಗೋ.ಮಧುಸೂದನ್ ಮಾಧ್ಯಮ ನೇರ ಪ್ರಸಾರದಲ್ಲಿ ಸಂವಿಧಾನದಲ್ಲಿ ಬರೆದಿರುವುದು ಸರಿಯಲ್ಲ. ನಾನು ಈ ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಸಂವಿಧಾನದ ಬಗ್ಗೆ ಹಗುರವಾಗಿ ಮಾತಾನಾಡಿ ಸಂವಿಧಾನ ಬರೆದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಮಠದ ಪೇಜಾವರ ಶ್ರೀ ಸ್ವಾಮಿಯವರು ಸಹ ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚನೆ ಮಾಡಿಲ್ಲವೆಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಈ ರೀತಿ ಹೇಳಿಕೆ ನೀಡುವುದನ್ನು ದೇಶದ್ರೋಹ ಎಂದು ಪರಿಗಣಿಸಿ ಇವರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯ ಮಾಡಿದರು.
ತಾಲೂಕು ಕಚೇರಿಯ ಶಿರಸ್ತೇದಾರ್ ಪ್ರಭಾಕರ್ ರವರಿಗೆ ಮನವಿ ಪತ್ರವನ್ನು ನೀಡಿದರು.
ಕರಡಕೆರೆ ಯೋಗೇಶ್, ಮರಳಿಗೆ ಶಿವರಾಜು, ಎಚ್. ಹೊಂಬಯ್ಯ, ಬೊಮ್ಮಲಿಂಗಯ್ಯ, ಕಿರಣ್‍ಕುಮಾರ್, ಸಿ.ಎ. ಕೆರೆಮೂರ್ತಿ, ಅಂಬರೀಶ್, ಚಂದ್ರಕುಮಾರ್, ತಿರುಮಲಯ್ಯ, ಶಂಕರ್ ಇನ್ನಿತರರು ಹಾಜರಿದ್ದರು.







