ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ಗೌರವಧನ : ಹೆಚ್.ಡಿ.ದೇವೇಗೌಡ

ತುಮಕೂರು,ಡಿ.04:ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಗೌರವಧನ ನೀಡುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಘೋಷಿಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,70 ವರ್ಷ ಮೀರಿದ ರೈತರಿಗೆ ಮಾಸಿಕ ಐದು ಸಾವಿರ ರೂ. ಸಹಾಯಧನ ನೀಡುತ್ತೇವೆ.ರೈತರು ಕಣ್ಣೀರು ಹಾಕಿದರೆ ದೇವೇಗೌಡರ ಆತ್ಮ ಸುಡುತ್ತೆ.ಆದ್ದರಿಂದ ರೈತರು ಕಂಬನಿ ಹಾಕದಂತೆ ನೋಡಿಕೊಳ್ಳುವುದು ನಮ್ಮ ಧರ್ಮ ಎಂದರು.
ನಾನು ಈ ಇಳಿ ವಯಸ್ಸಿನಲ್ಲಿಯೂ ಓಡಾಡುತ್ತಿರುವುದು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಅಲ್ಲ.ಈ ರಾಜ್ಯದ ರೈತರ ಕಣ್ಣೀರು ಒರೆಸುವ ಕೆಲಸ ಮಾಡಲು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ.ಜೆಡಿಎಸ್ ದೇವೇಗೌಡರ ಕುಟುಂಬದ ಆಸ್ತಿಯಲ್ಲ. ರಾಜ್ಯದ ರೈತರ ಪರಿಸ್ಥಿತಿಯನ್ನು ನೆನೆದು ಎಷ್ಟೋ ಬಾರಿ ಒಬ್ಬನೇ ಕುಳಿತು ಅತ್ತಿದ್ದೇನೆ.ಇವರ ಕಣ್ಣೀರು ಒರೆಸುವ ಉದ್ದೇಶದಿಂದಲೇ ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಹೆಚ್.ಡಿ.ದೇವೇಗೌಡರು ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಸತ್ತು ಹೋಗಿದೆ ಎಂದರೆ, ಕೆ.ಪಿ.ಸಿ.ಸಿ.ಅಧ್ಯಕ್ಷರು ದೇವೇಗೌಡರ ಸೊಂಟ ಮುರಿಯೋದು ಬಾಕಿ ಎಂದಿದ್ದರು.ಇಲ್ಲಿ ಸೇರಿರುವ ಜನಸ್ತೋಮವನ್ನು ನೋಡಿದರೆ,ಜನ ಇವರಿಗೆ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂಬುದು ಖಾತ್ರಿಯಾಗುತ್ತಿದೆ.
ಕಾರ್ಯಕ್ರಮದಲ್ಲಿ ಶಾಸಕ ಸುಧಾಕರಲಾಲ್,ಜಿ.ಪಂ.ಅಧ್ಯಕ್ಷೆ ಲತಾ, ಶಾಸಕರಾದ ಎಸ್.ಆರ್.ಶ್ರೀನಿವಾಸ್,ಶರವಣ, ಬೆಮೆಲ್ ಕಾಂತರಾಜು,ಚೌಡರೆಡ್ಡಿ ತೂಪಲ್ಲಿ,ಮಾಜಿ ಸಚಿವ ಬಿ.ಸತ್ಯನಾರಾಯಣ,ಜಿ.ಪಂ.ಸದಸ್ಯರು ಹಾಗೂ ಜೆಡಿಎಸ್ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.







