ಮೀನು ಸಂತತಿ ರಕ್ಷಣೆಯ ಪ್ರಯತ್ನಗಳಾಗುತ್ತಿಲ್ಲ: ಪ್ರಮೋದ್ ಮಧ್ವರಾಜ್
ಡಿ. 8-11ರವರೆಗೆ ನಗರದಲ್ಲಿ ಮತ್ಸಮೇಳ

ಬೆಂಗಳೂರು, ಡಿ.5: ರಾಜ್ಯದಲ್ಲಿ 1957ರಲ್ಲಿ ಆರಂಭವಾದ ಮೀನುಗಾರಿಕೆ ಇಲಾಖೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಡಿ.8 ರಿಂದ 11ರವರೆಗೆ ‘ಮತ್ಸಮೇಳ-2017’ ಆಯೋಜಿಸಲಾಗಿದೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀನಿಗಿಂತ ಉತ್ತಮಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರ ಅಗ್ಗದ ದರದಲ್ಲಿ ಸಾರ್ವಜನಿಕರಿಗೆ ಸಿಗುವುದಿಲ್ಲ. ಉದ್ಯೋಗಾವಕಾಶಗಳು ಮತ್ತು ಆದಾಯದ ಮೂಲವನ್ನು ಹೆಚ್ಚಿಸುವುದು ಮೀನುಗಾರಿಕೆ ವಲಯದ ಗಣನೀಯವಾದ ಮತ್ತು ಉಪಯುಕ್ತ ಕೊಡುಗೆಯಾಗಿದೆ ಎಂದರು.
ಹಲವಾರು ಕಾರಣಗಳಿಂದ ಈ ವರ್ಷ ಮೀನು ಉತ್ಪಾದನೆ ಕಡಿಮೆಯಾಗಿದೆ. ಚಿಲಿ, ಪೆರು ದೇಶಗಳಲ್ಲಿ ಮೀನುಗಳ ಸಂತತಿ ಉಳಿಸಲು ಆಗುತ್ತಿರುವ ಪ್ರಯತ್ನಗಳು ನಮ್ಮ ದೇಶದಲ್ಲಿ ನಡೆಯುತ್ತಿಲ್ಲ. ಮೀನುಗಳ ಸಂತತಿ ಉತ್ತೇಜಿಸಲು, ಮೀನುಗಳನ್ನು ಹಿಡಿಯುವುದನ್ನು ನಿಯಂತ್ರಿಸಲು ನಾವು ವಿಫಲವಾಗಿದ್ದೇವೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದರೆ ಭವಿಷ್ಯದಲ್ಲಿ ಮತ್ಸಕ್ಷಾಮ್ಯ ಎದುರಾಗಲಿದೆ. ಅಲ್ಲದೆ, ದೊಡ್ಡ ಗಂಡಾಂತರಕ್ಕೆ ಮೀನುಗಾರಿಕೆ ಬಲಿಯಾಗಲಿದೆ. ಗೋವಾ ರಾಜ್ಯದಿಂದ ಹೊರಗಡೆ ಮೀನುಗಳನ್ನು ಮಾರಾಟ ಮಾಡಿದರೆ ಅದಕ್ಕೆ ವಿಶೇಷ ತೆರಿಗೆ ವಿಧಿಸುವುದಾಗಿ ಅಲ್ಲಿನ ಮೀನುಗಾರಿಕೆ ಸಚಿವರು ಇತ್ತೀಚೆಗೆ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಅವರು ತಿಳಿಸಿದರು.
ಎಲ್ಲ ರಾಜ್ಯಗಳು ಇದೇ ರೀತಿಯಲ್ಲಿ ತೆರಿಗೆಗಳನ್ನು ಹಾಕಲು ಮುಂದಾದರೆ ಮೀನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆ. ರಾಜ್ಯದ ಸ್ವಾರ್ಥಕ್ಕಿಂತ ದೇಶದ ಬಗ್ಗೆಯೂ ಯೋಚನೆ ಮಾಡಬೇಕಿದೆ. ಈ ವಿಶೇಷ ತೆರಿಗೆ ನಿರ್ಧಾರದಿಂದ ಗೋವಾರ ರಾಜ್ಯದ ಮೀನುಗಾರರಿಗೂ ಅನ್ಯಾಯವಾಗುತ್ತದೆ ಎಂದು ಪ್ರಮೋದ್‌ಮಧ್ವರಾಜ್ ಹೇಳಿದರು.
ಈ ವರ್ಷ 4 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿದೆ. 1500 ಕೋಟಿ ರೂ.ಗಳಷ್ಟು ಮೀನಿನ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಮೀನುಗಾರರಿಗೆ ಡಿಸೇಲ್ ಸಬ್ಸಿಡಿಯನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, ಅಕ್ಟೋಬರ್ ವರೆಗಿನ ಸಬ್ಸಿಡಿ ಹಣವನ್ನು ಜಮೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮೀನಿನ ರಫ್ತು ವಹಿವಾಟು, ದೇಶದ ವಿದೇಶಿ ವಿನಿಮಯದಲ್ಲಿ ಗಣನೀಯ ಪಾಲು ಹೊಂದಿದ್ದು, ಕೆಲವು ಕೃಷಿ ಉತ್ಪನ್ನಗಳ ರಫ್ತು ವಹಿವಾಟಿಗಿಂತ ಮುಂಚೂಣಿಯಲ್ಲಿದೆ. ನಮ್ಮ ದೇಶದಿಂದ ಸುಮಾರು 35 ಸಾವಿರ ಕೋಟಿ ರೂ.ಮೊತ್ತದ ಮೀನಿನ ಉತ್ಪನ್ನಗಳು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ದೇಶದ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಲ್ಲಿ ಮೀನುಗಾರಿಕೆ ಕ್ಷೇತ್ರವು ಪ್ರಮುಖ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಮತ್ಸಮೇಳವು ಮೀನುಗಾರಿಕೆ ಇಲಾಖೆಯ ಪ್ರಮುಖ ಮೀನುಗಾರಿಕಾ ಪ್ರದರ್ಶನಗಳಲ್ಲಿ ಒಂದಾಗಿದ್ದು, ಒಂದೇ ಸೂರಿನಡಿ ಇಲಾಖಾ ಕಾರ್ಯಕ್ರಮಗಳ ಹಾಗೂ ಮತ್ಸೋದ್ಯಮದ ಜ್ಞಾನವನ್ನು ಹರಡಲಿದೆ. ಇಲಾಖೆಯು 60 ವರ್ಷಗಳನ್ನು ಪೂರೈಸುತ್ತಿರುವ ಅಂಗವಾಗಿ ಆಯೋಜಿಸಲಾಗಿರುವ ಈ ಮೇಳದಲ್ಲಿ 60 ಮಳಿಗೆಗಳು ಇರಲಿವೆ ಎಂದು ಅವರು ತಿಳಿಸಿದರು.
ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಉದ್ದಿಮೆಗಳು ಹಾಗೂ ಸಂಸ್ಥೆಗಳನ್ನು ಸಾರ್ವಜನಿಕರು, ಕೃಷಿಕರು ಮತ್ತು ಮೀನುಗಾರರು ಸಂಪರ್ಕಿಸಲು ಅನುವಾಗುವಂತೆ ಒಂದು ಸೇತುವೆಯಾಗುವುದು ಈ ಮೇಳದ ಪ್ರಮುಖ ಉದ್ದೇಶ. ರಾಜ್ಯದ ತಂತ್ರಾದಾರಿತ ಮೀನುಗಾರಿಕಾ ಅಭಿವೃದ್ಧಿಯನ್ನು ಉನ್ನತ ಮಟ್ಟಕ್ಕೆ ಚುರುಕುಗೊಳಿಸಲು ಈ ಮೇಳ ವೇದಿಕೆಯನ್ನು ಒದಗಿಸಲಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಮೇಳಕ್ಕೆ ಸುಮಾರು 4 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಆಲಂಕಾರಿಕ ಮೀನು ಗ್ಯಾಲರಿ, ಬಹು ವಿಷಯಾಧಾರಿತ ಮಾಹಿತಿ ವಿಭಾಗ, ಸ್ವಾದಿಷ್ಟ ಆಹಾರ ಮಳಿಗೆ, ಮೀನಿನ ಖಾದ್ಯ ತಯಾರಿಕೆ ಹಾಗೂ ತಾಜಾ ಮೀನು ಮಾರಾಟ ಮಳಿಗೆಗಳು ಈ ಮೇಳದ ಪ್ರಮುಖ ಆಕರ್ಷಣೆಗಳಾಗಿದ್ದು, ಪ್ರವೇಶ ಉಚಿತವಾಗಿರುತ್ತದೆ ಎಂದು ಅವರು ತಿಳಿಸಿದರು.
ನನ್ನಿಂದಲೆ ಮೇಳದ ಉದ್ಘಾಟೆ: ಮತ್ಸಮೇಳ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮನವಿ ಮಾಡಲಾಗಿತ್ತು. ಆದರೆ, ಅವರ ಕಾಲಾವಕಾಶ ಸಿಗದ ಹಿನ್ನೆಲೆಯಲ್ಲಿ ನಾನೇ ಮೇಳವನ್ನು ಉದ್ಘಾಟಿಸುತ್ತೇನೆ. ಶಿಷ್ಟಾಚಾರದ ಪ್ರಕಾರ ಕೇಂದ್ರ ಸಚಿವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಲಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ವೀರಪ್ಪಗೌಡ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್ವಾಲ್ ಉಪಸ್ಥಿತ ರಿದ್ದರು.
ಗಾಳಕ್ಕೆ ಬಾಯಿ ಹಾಕುವವನಲ್ಲ
ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುತ್ತಿರುವುದಾಗಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಉತ್ತರಿಸಿದ ಸಚಿವ ಪ್ರಮೋದ್ ಮಧ್ವರಾಜ್, ನಾನು ಅಂತಹ ಗಾಳಕ್ಕೆ ಸುಲಭವಾಗಿ ಬಾಯಿ ಹಾಕುವವನಲ್ಲ ಎಂದರು.







