ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ ಯತ್ನ: ಕೆ.ಸಿ.ವೇಣುಗೋಪಾಲ್

ಬೆಂಗಳೂರು, ಡಿ.5: ರಾಜ್ಯದಲ್ಲಿ ಕಾನೂನು ಸುವ್ಯವಸ್ಥ್ಥೆ ಹಾಳು ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ ಸಿಂಹ ವಿಡಿಯೋ ನೋಡಿದ್ದೇನೆ. ಕಾನೂನು ಸುವ್ಯವಸ್ಥೆ ಹದಗೆಡಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದೇ ಅವರ ಸಿದ್ಧಾಂತ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಟೀಕಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದಿಸುತ್ತಿರುವ ಅರ್ಥವೇನು? ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲು ಬೇರೆ ಯಾವುದೇ ವಿಚಾರಗಳಿಲ್ಲ. ಹಾಗಾಗಿ, ರಾಜ್ಯದಲ್ಲಿ ಕೋಮು ವಿಚಾರಗಳನ್ನು ಮುಂದಿಟ್ಟುಕೊಂಡು ರಸ್ತೆಗಿಳಿಯುತ್ತಿದ್ದಾರೆ ಎಂದು ಆರೋಪಿಸಿದರು.
ಸರೀತಾ ನಾಯರ್ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ವೇಣುಗೋಪಾಲ್, ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ. ಅದೊಂದು ರಾಜಕೀಯ ಪ್ರೇರಿತ ಆರೋಪ. ಎರ್ನಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸರೀತಾ ನಾಯರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದೇನೆ ಎಂದರು.
ಕೇರಳ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಾನಹಾನಿ ಪ್ರಕರಣದ ಆದೇಶ ಪ್ರತಿ ಲಗತ್ತಿಸಲಾಗಿದೆ. ನನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ ರಾಜಕೀಯದಿಂದಲೆ ನಿವೃತ್ತಿ ಆಗುತ್ತೇನೆ. 40 ವರ್ಷದ ನನ್ನ ಸಾರ್ವಜನಿಕ ಜೀವನದಲ್ಲಿ ಯಾವುದೆ ಕಪ್ಪು ಚುಕ್ಕೆ ಇಲ್ಲ ಎಂದು ಅವರು ತಿಳಿಸಿದರು.
ಕೇರಳದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿಲ್ಲ. ಸಿಪಿಎಂ ಸರಕಾರ ಇದೆ. ನನ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೆ ತನಿಖೆ ನಡೆಸಲಿ, ಅದನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ವೇಣುಗೋಪಾಲ್ ಹೇಳಿದರು.
ಪರಮೇಶ್ವರ್-ಸಿಎಂ ನಡುವೆ ಮನಸ್ತಾಪವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೆ ಮನಸ್ತಾಪವಿಲ್ಲ. ದಿಲ್ಲಿಯಿಂದ ನಾವು ಎಲ್ಲರೂ ಒಟ್ಟಿಗೆ ಬಂದಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಪಕ್ಷ ಅಂದ ಮೇಲೆ ಅವೆಲ್ಲ ಸಾಮಾನ್ಯ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರದ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಪರಮೇಶ್ವರ್ ಹೋಗುವುದಿಲ್ಲ. ಆದರೆ, ಪಕ್ಷದ ವತಿಯಿಂದ ಆಯೋಜಿಸಲಾಗುವ ಯಾತ್ರೆ, ರ್ಯಾಲಿ ಸೇರಿದಂತೆ ಪ್ರಚಾರ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಮಾಡುವ ಸಂಬಂಧ ಕೆಪಿಸಿಸಿಯಲ್ಲಿ ಮೂರು ದಿನಗಳ ಕಾಲ ಸರಣಿ ಸಭೆಗಳನ್ನು ನಡೆಸುತ್ತೇವೆ. ಪಕ್ಷದ ವಿವಿಧ ಘಟಕಗಳಿಂದ ಚುನಾವಣಾ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಸಮಿತಿಗಳಿಂದ ವರದಿಗಳನ್ನು ಪಡೆಯಲಾಗುವುದು. ಅಲ್ಲದೆ, ಪಕ್ಷ ಸಂಘಟನೆಗಾಗಿ ಘಟಕಗಳು ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳ ವರದಿಯನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.







