ಜಿಲ್ಲಾಸ್ಪತ್ರೆಯಲ್ಲಿ ಮಗು ಅಪಹರಣಕ್ಕೆ ವರ್ಷ; ಪತ್ತೆಗೆ ಮನವಿ
ಹಾಸನ, ಡಿ.5: ಕಳೆದ ವರ್ಷ ಜಿಲ್ಲಾಸ್ಪತ್ರೆಯಿಂದ ಅಪರಿಚಿತರು ಮಗುವೊಂದನ್ನು ಅಪಹರಿಸಿದ ಪ್ರಕರಣಕ್ಕೆ ಮಂಗಳವಾರ ಒಂದು ವರ್ಷವಾಗಿದ್ದು, ಕೂಡಲೆ ಅಪಹರಣವಾಗಿರುವ ಮಗುವನ್ನು ಶೀಘ್ರ ಪತ್ತೆ ಮಾಡಬೇಕೆಂದು ದಸಂಸ (ಭೀಮವಾದ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
2016ರ ಡಿಸೆಂಬರ್ 4ರಂದು ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸಕಲೇಶಪುರ ತಾಲೂಕಿನ ಕುಶಾಲನಗರದ ಮಾದೇವಿ ಎಂಬವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಾರನೆ ದಿನ ಡಿ.5ರಂದು ಮಾದೇವಿ ಅವರ ವಾರ್ಡಿಗೆ ಬಂದಿದ್ದ ನರ್ಸ್ ವೇಷಧಾರಿಯೊಬ್ಬಳು ಮಗುವನ್ನು ಐಸಿಯೂನಲ್ಲಿರುವ ವೆಂಟಿಲೇಟರ್‌ಗೆ ಕೊಂಡೊಯ್ಯುವ ನೆಪದಲ್ಲಿ ಪೋಷಕರನ್ನು ದಿಕ್ಕುತಪ್ಪಿಸಿ ಹಾಡಹಗಲೇ ಮಗುವನ್ನು ಅಪಹರಿಸಿದ್ದಳು. ಈ ಸಂಬಂಧ ಮಗು ಪತ್ತೆಗೆ ಡಿಸಿ, ಎಸ್ಪಿ ಸೇರಿದಂತೆ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದು, ಪ್ರತಿಭಟನೆಯನ್ನೂ ಮಾಡಲಾಗಿತ್ತು. ಆದರೆ ಒಂದು ವರ್ಷವಾದರೂ ಮಗು ಪತ್ತೆ ಆಗಿಲ್ಲ. ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಹಾಕಿದ್ದರಿಂದ ಅಪಹರಣ ಮಾಡಿದವರ ಮುಖ ಚಹರೆ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪೊಲೀಸರು ಸಾಕಷ್ಟು ಕೆಲಸ ಮಾಡಿದ್ದಾರಾದರೂ ಈವರೆಗೆ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಅಂದು ಆಸ್ಪತ್ರೆಯಲಿದ್ದ ವೈದ್ಯಾಧಿಕಾರಿ ಮತ್ತು ಸಂಬಂಧಪಟ್ಟವರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿತ್ತಾದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಡೀ ಪ್ರಕರಣವನ್ನು ಮುಚ್ಚು ಹಾಕುವ ಸಂಚು ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಮಿತಿ ಸಂಚಾಲಕ ನಾಗರಾಜ್ ಹೆತ್ತೂರು ಒತ್ತಾಯಿಸಿದ್ದಾರೆ.
ಸಮಿತಿಯ ತಾಲೂಕು ಅಧ್ಯಕ್ಷ ನವೀನ್ ಆಸರೆ, ಕಳುವಾದ ಅಪಹರಣಕ್ಕೊಳಗಾದ ಮಗುವಿನ ತಂದೆ ನಾಗರಾಜ್, ತಾಯಿ ಮಾದೇವಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.





