ವಿಶೇಷ ಸಮಿತಿ ಮೇಲುಸ್ತುವಾರಿಯಲ್ಲಿ ಕುದುರೆ ರೇಸ್ ನಡೆಸಲು ಸಾಧ್ಯವೇ: ಪರಿಶೀಲಿಸಿ ತಿಳಿಸಲು ಹೈಕೋರ್ಟ್ ನಿರ್ದೇಶ

ಬೆಂಗಳೂರು, ಡಿ.5: ಪ್ರಸಕ್ತ ಋತುವಿನ ಕುದುರೆ ರೇಸ್ ಅನ್ನು ವಿಶೇಷ ಸಮಿತಿ ಮೇಲುಸ್ತುವಾರಿಯಲ್ಲಿ ನಡೆಸಲು ಸಾಧ್ಯವೇ ಹೇಗೆ ಎಂಬುದನ್ನು ಪರಿಶೀಲಿಸಿ ತಿಳಿಸಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ ಕಂಪೆನಿ ನಿರ್ದೇಶಕರು, ಕರ್ನಾಟಕ ತರಬೇತುದಾರರ ಸಂಘದ ಕಾರ್ಯದರ್ಶಿ ಲೋಕಾಂತ ಗೌಡ ಹಾಗೂ ಎಚ್.ಎಸ್.ಚಂದ್ರೇಗೌಡ ಸೇರಿ 50 ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೋರ್ಟ್ ಪರವಾನಿಗೆ ನೀಡುವ ಪ್ರಾಧಿಕಾರ ಅಲ್ಲ. ಅರ್ಜಿದಾರರ ಹಿತರಕ್ಷಣೆ ದೃಷ್ಟಿಯಿಂದ ಸರಕಾರದ ಅಭಿಪ್ರಾಯ ಏನಿದೆ ಎಂಬುದನ್ನು ಪಡೆದು ಕೋರ್ಟ್‌ಗೆ ಸಲ್ಲಿಸಿ ಎಂದು ನ್ಯಾಯಮೂರ್ತಿಗಳು ಅಡ್ವೊಕೇಟ್ ಜನರಲ್ ಎಂ.ಆರ್.ನಾಯಕ್ ಅವರಿಗೆ ನಿರ್ದೇಶಿಸಿದರು.
ಬೆಟ್ಟಿಂಗ್ ರೇಸ್ ಕುದುರೆಗೆ ಮಾದಕ ದ್ರವ್ಯ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪರವಾನಿಗೆ ನೀಡಿಲ್ಲ. ಇದರಿಂದ ಇಲ್ಲಿ ದುಡಿಯುತ್ತಿರುವ 139 ಕಾಯಂ ಉದ್ಯೋಗಿಗಳು, 212 ಕಾರ್ಮಿಕರು, 1200 ದಿನಗೂಲಿ ನೌಕರರು ಸೇರಿದಂತೆ ಹಲವು ವಿಭಾಗಗಳಲ್ಲಿ ದುಡಿಯುವ ಕಾರ್ಮಿಕರು ತೊಂದರೆಗೆ ಒಳಗಾಗಿದ್ದಾರೆ ಎಂಬುದು ಅರ್ಜಿದಾರರ ಆಕ್ಷೇಪ.
ಮೈಸೂರು ರೇಸ್ ಕೋರ್ಸ್ ಪರವಾನಿಗೆ ಕಾಯ್ದೆ1952ರ ಅನುಸಾರ ಕುದುರೆ ರೇಸ್ ಬೆಟ್ಟಿಂಗ್ ನಡೆಸಲು ಪರವಾನಗಿ ಕೋರಿ ನವೆಂಬರ್ 6 ಹಾಗೂ 16ರಂದು ಸಲ್ಲಿಸಿರುವ ಅರ್ಜಿಗಳನ್ನು ಮಾನ್ಯ ಮಾಡಲು ನಿರ್ದೇಶಿಸಬೇಕು. ಪರವಾನಿಗೆ ಸೇವೆ, ಸೌಲಭ್ಯ ಹಾಗೂ ರಿಯಾಯ್ತಿ ನೀಡಲು ಸರಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಲಾಗಿದೆ.







