ಮಣ್ಣಿನ ಆರೋಗ್ಯ ಸುಧಾರಣೆಗಾಗಿ ರೈತರು ಹೆಚ್ಚಿನ ಒತ್ತು ನೀಡಬೇಕು: ಡಾ. ಆರ್.ಗಿರೀಶ್
ವಿಶ್ವ ಮಣ್ಣು ದಿನಾಚರಣೆ

ಮೂಡಿಗೆರೆ, ಡಿ.5: ಮಣ್ಣಿನ ಆರೋಗ್ಯ ಸುಧಾರಣೆಗಾಗಿ ರೈತರು ಹೆಚ್ಚಿನ ಒತ್ತು ನೀಡಬೇಕು. ಅದರಿಂದ ಪ್ರತಿ ವರ್ಷ ಡಿ.5ನೆ ದಿನವನ್ನು ವಿಶ್ವ ಮಣ್ಣು ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಆರ್.ಗಿರೀಶ್ ಹೇಳಿದರು.
ಅವರು ಮಂಗಳವಾರ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಸುಮಾರು 10 ಕೋಟಿ ರೈತರು ಮಣ್ಣು ಆರೋಗ್ಯ ಚೀಟಿಯನ್ನು ಪಡೆದುಕೊಂಡಿದ್ದಾರೆ. ಮಣ್ಣು ಆರೋಗ್ಯ ಚೀಟಿಯಿಂದ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕೈಗೊಂಡಿದ್ದು, ಸುಸ್ಥಿರ ಬೇಸಾಯಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮವನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಉದ್ಘಾಟಿಸಿ ಮಾತನಾಡಿದರು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರವನ್ನು ಬಳಸಬೇಕು. ಕೃಷಿ ವಿಜ್ಞಾನ ಕೇಂದ್ರ ಹಾಗೂ ಇಲಾಖೆಗಳನ್ನು ಸಂಪರ್ಕಿಸಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ತೋಟಗಾರಿಕೆ ಮಹಾ ವಿದ್ಯಲಯದ ಡೀನ್ ಡಾ. ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಯವ ಗೊಬ್ಬರದ ಮಹತ್ವದ ಹಾಗೂ ಮಣ್ಣು ಸಂರಕ್ಷಣೆಯ ಬಗ್ಗೆ ತಿಳಿಸಿಕೊಡುತ್ತಾ ಸಾವಯವ ಅಂಶಗಳನ್ನು ಮಣ್ಣಿಗೆ ಹೆಚ್ಚಾಗಿ ಸೇರಿಸುವುದರಿಂದ ಬರವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆ ಉಪ ನಿರ್ಧೇಶಕ ಲೋಕೇಶ್ ಮಾತನಾಡಿ, ತಮ್ಮದೇ ಜಮೀನಿನಲ್ಲಿ ದೊರೆಯುವ ಸಾವಯವ ಪದಾರ್ಥಗಳನ್ನು ಬಳಸಿಕೊಂಡು ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಮುಂತಾದ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆಯನ್ನು ಗಳಿಸುವುದಲ್ಲದೆ ಇಳುವರಿಯನ್ನು ಹಚ್ಚಿಸುತ್ತದೆ ಎಂದು ಹೇಳಿದರು.
ಮೂಡಿಗೆರೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಡಾ. ಶಿವಪ್ರಸಾದ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಬೇಸಾಯ ಶಾಸ್ತ್ರ) ಸುನಾಗ್ ಎಂ.ಎನ್. ಮಾನಾಡಿದರು. ಕಾರ್ಯಕ್ರಮದಲ್ಲಿ 350 ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ರೈತರಿಗೆ ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಯಿತು.
ಕೇಂದ್ರದ ಮಣ್ಣು ವಿಜ್ಞಾನಿ ಎಲ್.ಶ್ರೀನಿವಾಸ ಪ್ರಸಾದ್ ನಿರೂಪಿಸಿದರು. ತೋಟಗಾರಿಕಾ ವಿಜ್ಞಾನಿ ಎಲ್.ರಾಜೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಡೇಮಡ್ಕಲ್ ಕೃಷಿ ಮತ್ತು ತೋಟಕಾರಿಕೆ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಎ.ವಿ.ಸ್ವಾಮಿ, ಮತ್ತಿತರರಿದ್ದರು.







