ಸರಸ್ವತಿ ಪುರಸ್ಕಾರಕ್ಕೆ ಪ್ರೊ.ವಿ.ಬಿ.ಅರ್ತಿಕಜೆ ಅಯ್ಕೆ

ಪುತ್ತೂರು, : ಪುತ್ತೂರಿನ ಪುರುಷರಕಟ್ಟೆಯಲ್ಲಿರುವ ಕೊಡೆಂಕಿರಿ ಫೌಂಡೇಶನ್ ಪ್ರವರ್ತಿತ ಸರಸ್ವತಿ ವಿದ್ಯಾಮಂದಿರವು ಆಯೋಜಿಸುವ ‘ಸರಸ್ವತಿ ಪುರಸ್ಕಾರ’ಕ್ಕೆ ವಿಶ್ರಾಂತ ಉಪನ್ಯಾಸಕ, ಹಿರಿಯ ಸಾಹಿತಿ, ಪತ್ರಕರ್ತ, ಲೇಖಕ ಪ್ರೊ.ವಿ.ಬಿ.ಅರ್ತಿಕಜೆ ಆಯ್ಕೆಯಾಗಿದ್ದಾರೆ.
ಡಿ 7ರಂದು ಪೂರ್ವಾಹ್ನ ಕೊಡೆಂಕಿರಿ ಫೌಂಡೇಶನ್ನಿನ ಅಧ್ಯಕ್ಷ ಸುಬ್ರಾಯ ಉಂಗ್ರುಪುಳಿತ್ತಾಯರ ಅಧ್ಯಕ್ಷತೆಯಲ್ಲಿ ನಡೆಯುವ ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಸರಸ್ವತಿ ಪುರಸ್ಕಾರವನ್ನು ಪ್ರೊ.ಅರ್ತಿಕಜೆ ಅವರಿಗೆ ಪ್ರದಾನಿಸಲಾಗುವುದು. ಶಾಸಕಿ ಶಕುಂತಲಾ ಶೆಟ್ಟಿ, ಸರ್ವೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಎಚ್.ಜಿ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅಪರಾಹ್ನ ವರ್ಧಂತ್ಯುತ್ಸವವು ಆಡಳಿತ ಮಂಡಳಿ ಸದಸ್ಯೆ ವರದ ಕುಮಾರಿ ಮೀಯಾಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್., ಸಾಮಾಜಿಕ ನೇತಾರ ಅರುಣ ಕುಮಾರ್ ಪುತ್ತಿಲ, ಬೆಂಗಳೂರಿನ ಉದ್ಯಮಿ ಪ್ರಸಾದ್ ರೆಡ್ಡಿ, ಪುತ್ತೂರು ರೋಟರಿ ಪೂರ್ವ ಇದರ ಅಧ್ಯಕ್ಷ ಜಯಂತ ನಡುಬೈಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದು ಸಂಚಾಲಕ ಅವಿನಾಶ್ ಕೊಡೆಂಕಿರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಪ್ರಕಾಶ್ ಕೊಡೆಂಕಿರಿ, ನಾ. ಕಾರಂತ ಪೆರಾಜೆ, ಜೀವನರಾಮ್ ಸುಳ್ಯ ಈ ಪುರಸ್ಕಾರ ಪಡೆದಿದ್ದರು.







