ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಾಡಪಿಸ್ತೂಲ್ ಪೂರೈಕೆದಾರನನ್ನು ವಶಕ್ಕೆ ಪಡೆಯುವ ಸಾಧ್ಯತೆ?

ಬೆಂಗಳೂರು, ಡಿ.5: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನಾಡಪಿಸ್ತೂಲ್ ಪೂರೈಕೆ ಆರೋಪದ ಮೇಲೆ ಬಂಧಿತನಾಗಿರುವ ತಾಹೀರ್ ಹುಸೈನ್ ಯಾನೆ ಅನೂಪ್ ಗೌಡ (37) ಎಂಬಾತನನ್ನು ಸಿಟ್ ತನಿಖಾಧಿಕಾರಿಗಳು ಸದ್ಯದಲ್ಲೇ ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಅನೂಪ್ ಗೌಡನನ್ನು ಸಿಟ್ ತನಿಖಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದು, ನಾಡಪಿಸ್ತೂಲ್ ಪೂರೈಕೆ, ಹೊರ ರಾಜ್ಯಗಳ ಸಂಪರ್ಕ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಂಧನ: ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ನಾಡಪಿಸ್ತೂಲ್‌ಗಳನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂರು ದಿನಗಳ ಹಿಂದೆ ಸಿಸಿಬಿ ಪೊಲೀಸರು ಅನೂಪ್ ಗೌಡನನ್ನು ಪರಪ್ಪನ ಅಗ್ರಹಾರ ಬಳಿಯ ವಸತಿ ಗೃಹವೊಂದರಲ್ಲಿ ಬಂಧಿಸಿದ್ದರು. ಈತನ ವಶದಲ್ಲಿದ್ದ 7.65 ಎಂ.ಎಂ. ನಾಡಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದರು. ಇದೀಗ ಗೌರಿ ಹತ್ಯೆ ಪ್ರಕರಣ ಸಂಬಂಧ ಆತನನ್ನು ವಶಕ್ಕೆ ಪಡೆದು, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ ಮಾಹಿತಿ ಕಲೆಹಾಕಲು ಸಿಟ್ ತನಿಖಾಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ತಾಹೀರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಡಿ.16ರವರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಈತನ ವಿರುದ್ಧ ಹೊರ ರಾಜ್ಯಗಳ ಪೊಲೀಸ್ ಠಾಣೆಗಳಲ್ಲೂ ಮೊಕದ್ದಮೆ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಿವಾಹದ ಬಳಿಕ ಹೆಸರು ಬದಲಾವಣೆ’
ಆರೋಪಿ ತಾಹೀರ್ ನಾಲ್ಕೈದು ವರ್ಷಗಳ ಹಿಂದೆ ಅನ್ಯಧರ್ಮೀಯ ಯುವತಿಯನ್ನು ವಿವಾಹವಾದ ಬಳಿಕ ಅನೂಪ್ ಗೌಡ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ. ಅಲ್ಲದೆ, ಬೆಂಗಳೂರಿನ ಸಂಜಯನಗರದ ವಿಳಾಸದಲ್ಲಿಯೂ ಅನೂಪ್ ಗೌಡ ಎಂದು ಉಲ್ಲೇಖ ಇರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.







