ಬಾಬರಿ ಮಸೀದಿ ಧ್ವಂಸದ ಹಿಂದೆ ಬಿಜೆಪಿ-ಕಾಂಗ್ರೆಸ್ ಸಮಾನ ಭಾಗಿ: ಸಿ.ಎಸ್. ದ್ವಾರಕನಾಥ್
'ಬಾಬರಿ ಮಸೀದಿ ಧ್ವಂಸ -ರಾಷ್ಟ್ರೀಯ ಅವಮಾನಕ್ಕೆ 25 ವರ್ಷಗಳು' ವಿಚಾರ ಸಂಕಿರಣ

ಮಂಗಳೂರು, ಡಿ.5: ಬಾಬರಿ ಮಸೀದಿಯ ಧ್ವಂಸದ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಭಾಗಿಗಳಾಗಿವೆ. ಯಾಕೆಂದರೆ ಆವತ್ತು ಧ್ವಂಸಗೈದವರಲ್ಲಿ ಬಿಜೆಪಿಯ ಮುಂಚೂಣಿ ನಾಯಕರಿದ್ದರು. ಕೇಂದ್ರದ ಅಧಿಕಾರದಲ್ಲಿ ಕಾಂಗ್ರೆಸ್ ಇತ್ತು. ಮಸೀದಿಯನ್ನು ದ್ವಂಸಗೊಳಿಸುವ ಬಗ್ಗೆ ಗುಪ್ತಚರ ವರದಿಯ ಬಳಿಕವೂ ಅಂದು ಪ್ರಧಾನಿಯಾಗಿದ್ದ ನರಸಿಂಹ ರಾವ್‌ರ ಮೌನ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಹೇಳಿದರು.
ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯು ‘ಬಾಬರಿ ಮಸೀದಿ ಧ್ವಂಸ-ರಾಷ್ಟ್ರೀಯ ಅವಮಾನಕ್ಕೆ 25 ವರ್ಷಗಳು’ಎಂಬ ವಿಷಯದ ಕುರಿತು ಮಂಗಳವಾರ ನಗರದ ಪುರಭವನದಲ್ಲಿ ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಮತ್ತು ಕಾಂಗ್ರೆಸ್‌ನ ಜಂಟಿ ಕಾರ್ಯಾಚರಣೆಯಿಂದಲೇ ಈ ಕೃತ್ಯ ನಡೆದಿದೆ. ಬಿಜೆಪಿ ಹಿಂದುತ್ವ ನೀತಿ ಅನುಸರಿಸಿದರೆ, ಕಾಂಗ್ರೆಸ್ ಮೃದು ಹಿಂದುತ್ವ ನೀತಿ ಪಾಲಿಸುತ್ತಿದೆ. ಇದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕಿದೆ ಎಂದ ಸಿ.ಎಸ್. ದ್ವಾರಕನಾಥ್ ಬಾಬರಿ ಮಸೀದಿಯು ಈ ನೆಲದ ಅಸ್ಮಿತೆಯಾಗಿದೆ. ಅದನ್ನು ನಾಶ ಮಾಡುವ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಕಗ್ಗೊಲೆ ಮಾಡಲಾಗಿದೆ. ಅಷ್ಟೇ ಅಲ್ಲ, ಇದು ಭಾರತೀಯ ಪರಂಪರೆಯ ಮೇಲೆ ಹಿಂದುತ್ವವಾದಿ ಪರಂಪರೆಗಳು ಮಾಡಿದ ಹಲ್ಲೆಯಾಗಿದೆ ಎಂದರು.
ಗಾಂಧೀಜಿಯ ಕೊಲೆಗೆ 70 ವರ್ಷ, ಕಲಬುರ್ಗಿಯ ಕೊಲೆಗೆ 30 ತಿಂಗಳು, ಗೌರಿ ಲಂಕೇಶ್‌ರ ಹತ್ಯೆಗೆ 3 ತಿಂಗಳಾಗಿದ್ದು, ಇಂತಹ ಸರಣಿಯು ಲಜ್ಜೆಗೆಟ್ಟವರಿಂದ ನಡೆಯುತ್ತಲೇ ಇದೆ. ಇದಕ್ಕೆ ಪ್ರತಿರೋಧ ತೋರದಿದ್ದರೆ ಇಂತಹ ರಾಷ್ಟ್ರೀಯ ಅವಮಾನಗಳಿಗೆ ತಡೆ ಇಲ್ಲವಾಗಬಹುದು ಎಂದು ಸಿ.ಎಸ್.ದ್ವಾರಕನಾಥ್ ಹೇಳಿದರು.
ಚಿಂತಕ ಜಿ.ರಾಜಶೇಖರ್ ಮಾತನಾಡಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ನಿರ್ಲಕ್ಷ್ಯ ತಾಳುತ್ತಿದೆ. ಹಾಗಾಗಿ ಬಾಬರಿ ಮಸೀದಿ ಧ್ವಂಸವನ್ನು ಸಹಿಸಲು, ಮರೆಯಲು ಸಾಧ್ಯವಿಲ್ಲ. ಅದಕ್ಕೆ ನಿರಂತರ ಹೋರಾಟ ಮಾಡಬೇಕಿದೆ. ಅಲ್ಲದೆ ನಿದ್ದೆಯಲ್ಲಿರುವವರಂತೆ ನಟಿಸುವವರನ್ನು ಎಚ್ಚರಿಸಬೇಕಿದೆ ಎಂದರು.
ಕೇರಳ ಹೈಕೋರ್ಟ್‌ನ ನ್ಯಾಯವಾದಿ ರಫೀಕ್ ಕುಟ್ಟಿ ಕಾಟೂರು, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಮಾತನಾಡಿದರು. ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಂದರ್ಭ ‘ಬಾಬರಿ ಮಸೀದಿ: ಮರೆಯದಿರೋಣ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಯುನಿವೆಫ್ ರಾಜ್ಯಾಧ್ಯಕ್ಷ ರಫೀ ಉದ್ದೀನ್ ಕುದ್ರೋಳಿ, ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಚಾಲಕ ಎಂ. ಶಿವಪ್ಪ ಅಟ್ಟೋಲೆ, ಅಲ್‌ಹಕ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೆ., ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಗೌರವ ಸಲಹೆಗಾರ ರಫೀಕ್ ಮಾಸ್ಟರ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ದ.ಕ. ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ, ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲ್, ಸಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ ಉಪಸ್ಥಿತರಿದ್ದರು.
ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ಅಥಾವುಲ್ಲಾ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ವಂದಿಸಿದರು. ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಪೇಜಾವರ ಹಿಟ್ ಆ್ಯಂಡ್ ರನ್: ಸಂವಿಧಾನ ಬದಲಾವಣೆ ಹಾಗೂ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವುದಕ್ಕೆ ಸಂಬಂಧಿಸಿದಂತೆ ಉಡುಪಿಯ ಪೇಜಾವರ ಸ್ವಾಮೀಜಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ನಾನು ಅವರನ್ನು ಸಂವಾದಕ್ಕೆ ಆಹ್ವಾನಿಸಿದ್ದೆ. ಆದರೆ, ಅವರು ಅದನ್ನು ಸ್ವೀಕರಿಸದೆ ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ ಎಂದು ಸಿ.ಎಸ್. ದ್ವಾರಕನಾಥ್ ಹೇಳಿದರು.







