ಪತ್ರಕರ್ತನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಮಂಡ್ಯ, ಡಿ.5: ತುಮಕೂರಿನ ಬಿಟಿವಿ ವರದಿಗಾರ ವಾಗೀಶ್ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಪತ್ರಕರ್ತರ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿ ಧರಣಿ ನಡೆಸದ ಪತ್ರಕರ್ತರು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮುಖಂಡರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಘಟನೆ ಸಂಬಂಧ ದೂರು ದಾಖಲಾಗಿದ್ದರೂ ಇದುವರೆಗೂ ಆರೋಪಿಗಳನ್ನು ಬಂಧಿಸದಿರುವುದು ಅಕ್ಷಮ್ಯ ಅಪರಾಧ. ಸರಕಾರ ತನ್ನ ಇರುವಿಕೆಗಾದರೂ, ಕಾನೂನು ಸುವ್ಯವಸ್ಥೆ ಇನ್ನೂ ಜೀವಂತವಿದೆ ಎಂಬ ಖಾತ್ರಿಗಾದರೂ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ತಾಕೀತು ಮಾಡಿದರು.
ಪ್ರಸ್ತುತ ದಿನಗಳಲ್ಲಿ ದೇಶಾದ್ಯಂತ ಪತ್ರಕರ್ತರ ಮೇಲೆ ದೌರ್ಜನ್ಯಗಳು, ಹಲ್ಲೆಗಳು ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ನಿರ್ಭಯವಾಗಿ ಕೆಲಸ ಮಾಡಲು ಪತ್ರಕರ್ತರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು ಎಂದೂ ಅವರು ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾಧ್ಯಕ್ಷ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ್, ಕೆ.ಎನ್.ರವಿ, ಬಿ.ಟಿ.ಮೋಹನ್‍ಕುಮಾರ್, ಮಾದರಹಳ್ಳಿ ರಾಜು, ಬಿ.ಕೆ.ಸತೀಶ್, ಬಸವರಾಜ ಹೆಗಡೆ, ಡಿ.ಎಲ್.ಲಿಂಗರಾಜು, ನಾಗೇಶ್, ಕೆ.ಶಂಭು, ಬಿ.ಪಿ.ಪ್ರಕಾಶ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







