ಔಪಚಾರಿಕವಾಗಿ ರಾಜೀನಾಮೆ ವಾಪಸ್ ಪಡೆದ ಹರೀರಿ

ಬೆರೂತ್ (ಲೆಬನಾನ್), ಡಿ. 5: ಎದುರಾಳಿ ರಾಜಕೀಯ ಪಕ್ಷಗಳೊಂದಿಗೆ ಒಪ್ಪಂದವೊಂದಕ್ಕೆ ಬಂದ ಬಳಿಕ, ಲೆಬನಾನ್ ಪ್ರಧಾನಿ ಸಅದ್ ಹರೀರಿ ಮಂಗಳವಾರ ಔಪಚಾರಿಕವಾಗಿ ತನ್ನ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಲೆಬನಾನ್ ಸಚಿವ ಸಂಪುಟ ಸಭೆಯ ಕೊನೆಯಲ್ಲಿ ಈ ಪ್ರಕಟನೆಯನ್ನು ನೀಡಲಾಗಿದೆ. ನವೆಂಬರ್ 4ರಂದು ಸೌದಿ ಅರೇಬಿಯ ಪ್ರವಾಸದಲ್ಲಿದ್ದ ಹರೀರಿ ಆಶ್ಚರ್ಯಕರ ರೀತಿಯಲ್ಲಿ ದಿಢೀರ್ ಆಗಿ ತನ್ನ ರಾಜೀನಾಮೆಯನ್ನು ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.
ಅವರ ಈ ಅನಿರೀಕ್ಷಿತ ನಿರ್ಧಾರದಿಂದ ಲೆಬನಾನ್ ಆಘಾತಗೊಂಡಿತ್ತು.
ಹಿಝ್ಬುಲ್ಲಾ ಲೆಬನಾನ್‌ನ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದರಿಂದ ಬೇಸತ್ತು ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹರೀರಿ ಹೇಳಿದ್ದರು.
ಅವರ ಸರಕಾರದಲ್ಲಿ ಹಿಝ್ಬುಲ್ಲಾವನ್ನು ಪ್ರತಿನಿಧಿಸುತ್ತಿರುವ ಸಚಿವರೂ ಇದ್ದಾರೆ. ಅರಬ್ ದೇಶಗಳ ಸಂಘರ್ಷಗಳಿಂದ ದೂರ ಉಳಿಯಲು ಸರಕಾರದ ಎಲ್ಲ ಭಾಗೀದಾರ ಘಟಕಗಳು ಒಪ್ಪಿಕೊಂಡಿವೆ ಎಂದು ಹರೀರಿ ಮಂಗಳವಾರ ಹೇಳಿದರು.
Next Story





