ವಿಶ್ವ ಮಾನವರನ್ನಾಗಿ ರೂಪಿಸುವುದು ಸಮಾಜದ ಕರ್ತವ್ಯ: ನಿಸಾರ್ ಅಹ್ಮದ್

ಉಡುಪಿ, ಡಿ.5: ಜಾತಿ, ಧರ್ಮ, ಮತ, ಭಾಷೆಯ ಸಂಕೋಲೆಯಲ್ಲಿ ಬಂಧಿಯಾಗಿ ಬೆಳೆಯುವ ಮನುಷ್ಯನನ್ನು ಶಿಕ್ಷಣ, ಸಂಸ್ಕೃತಿ, ನಾಗರಿಕತೆಯ ಮೂಲಕ ಪರಿಪೂರ್ಣ ವ್ಯಕ್ತಿತ್ವದ ವಿಶ್ವ ಮಾನವನನ್ನಾಗಿ ರೂಪಿಸುವುದು ಸಮಾಜದ ಕರ್ತವ್ಯ ಎಂದು ಪದ್ಮಶ್ರೀ ಕವಿ ಡಾ.ಕೆ.ಎಸ್.ನಿಸಾರ್ ಅಹ್ಮದ್ ಹೇಳಿದ್ದಾರೆ.
ಉಡುಪಿ ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್ ಹಾಗೂ ಅಮೋಘ ಸಾಹಿತ್ಯ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ಸನ್ಮಾನ ಹಾಗೂ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ನಾವು ಕವಿ, ಸಾಹಿತಿಗಳ ಬಗ್ಗೆ ಅಧ್ಯಯನ ಮಾಡುವುದರಿಂದ ನಮ್ಮ ಸಂವೇದನಾಶೀಲತೆ ವೃದ್ಧಿಯಾಗುತ್ತದೆ. ವಿಲಾಸಿ ಜೀವನ ಹೆಚ್ಚು ಶೋಭೆಯಲ್ಲ. ಸಾಹಿತ್ಯವು ಅಂತಹ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದುದರಿಂದ ನಾವು ಅಂರ್ತಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಯೋಚನೆ ಮಾಡುವ ನಾವು ಈ ಲೌಕಿಕ ಜೀವನದಲ್ಲಿ ಹಣ, ಸಂಪತ್ತೇ ಮುಖ್ಯ ಎಂದು ತಿಳಿದುಕೊಂಡಿದ್ದೇವೆ. ನಮ್ಮ ಬದುಕಿನಲ್ಲಿ ಅದು ಮಾತ್ರ ಮುಖ್ಯವಾಗಿರದೆ ಸದ್ಗುಣಗಳನ್ನು ಬೆಳೆಸಿ ಕೊಂಡು ಜೀವನವನ್ನು ಉತ್ತವುವಾಗಿ ಮುನ್ನಡೆಸಬೇಕು ಎಂದರು.
ಭಾರತೀಯ ಭಾಷೆಗಳು ನಮ್ಮ ಜೊತೆ ರಕ್ತ ಸಂಬಂಧ ಹೊಂದಿದ್ದರೆ, ಆಂಗ್ಲ ಭಾಷೆ ಕೇವಲ ಸ್ನೇಹ ಸಂಬಂಧ ಮಾತ್ರ ಹೊಂದಿದೆ. ಆಂಗ್ಲ ಭಾಷೆಯು ಜಗತ್ತಿನ ಸಮೃದ್ಧ ಭಾಷೆಯಾಗಿದ್ದು, ಕನ್ನಡ ಹೋರಾಟಗಾರರ ಮಾತು ಕೇಳಿ ಅದನ್ನು ಕಡೆಗಣಿಸುವುದು ಸರಿಯಲ್ಲ. ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಯಬೇಕು. ಆದರೆ ಅದರ ಸಂಸ್ಕೃತಿಯ ಜೊತೆ ನಾವು ಸೇರಿಕೊಳ್ಳಬಾರದು ಎಂದು ಅವರು ಹೇಳಿದರು.
ಮಾಹೆ ಡೀಮ್ಡ್ ವಿವಿಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪವನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ 75ನೇ ವರ್ಷಾಚರಣೆ ಪ್ರಯುಕ್ತ ಶೀಘ್ರವೇ ಸಂಪೂರ್ಣ ಹವಾನಿಯಂತ್ರಿತ ಸಭಾಂಗಣವಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯಕ್ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸಂಧ್ಯಾ ನಂಬಿಯಾರ್, ಅಮೋಘ ಅಧ್ಯಕ್ಷೆ ಪೂರ್ಣಿಮಾ ಸುರೇಶ್ ನಾಯಕ್, ರಂಗಸ್ಥಳದ ಗೌರವಾಧ್ಯಕ್ಷ ಮನೋಹರ ಶೆಟ್ಟಿ, ಅಧ್ಯಕ್ಷ ಕಿಶನ್ ಹೆಗ್ಡೆ, ಜೊತೆ ಕಾರ್ಯದರ್ಶಿ ಮೇಟಿ ಮುದಿಯಪ್ಪ, ಪ್ರೊ. ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ರಂಗಸ್ಥಳದ ಮ್ಯಾನೇಜಿಂಗ್ ಟ್ರಸ್ಟಿ ಯು.ಆರ್.ಸಭಾಪತಿ ಸ್ವಾಗತಿಸಿದರೆ, ಪೂರ್ಣಿಮಾ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಲ್ಪಾ ೋಷಿ ಕಾರ್ಯಕ್ರಮ ನಿರೂಪಿಸಿದರು.







