ಉಪವಾಸ ಕೂತಿದ್ದ ಅಭಿಮಾನಿಯ ಆಸೆ ಈಡೇರಿಸಿದ ಎಚ್.ಡಿ.ಕುಮಾರಸ್ವಾಮಿ
ಗ್ರಾಮಕ್ಕೆ ತೆರಳಿ ನವ ದಂಪತಿಗೆ ಆಶೀರ್ವಾದ

ಮದ್ದೂರು, ಡಿ. 5: ಮದುವೆಗೆ ಬರಲೇಬೇಕೆಂದು ಉಪವಾಸ ದರಣಿ ನಡೆಸಿದ್ದ ಅಭಿಮಾನಿಯೊಬ್ಬರ ಮನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಆಗಮಿಸಿ ನವದಂಪತಿಗೆ ಆಶೀರ್ವದಿಸಿ ಅಭಿಮಾನಿ ಬಯಕೆ ಈಡೇರಿಸಿದ್ದಾರೆ.
ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ರವಿ ಕಳೆದ ನ.29ರಂದು ತನ್ನ ಮದುವೆಗೆ ಕುಮಾರಸ್ವಾಮಿ ಆಗಮಿಸಬೇಕೆಂದು ತನ್ನ ಮನೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕುಮಾರಸ್ವಾಮಿ ಬರುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಅಂತ್ಯಗೊಳಿಸಿದ್ದರು.
ಡಿ.1ರಂದು ಮದುವೆಗೆ ಕಾರಣಂತರಗಳಿಂದ ಕುಮಾರಸ್ವಾಮಿ ಮದುವೆಗೆ ಆಗಮಿಸಲಿರಲಿಲ್ಲ. ಆನಂತರ ಬರುವುದಾಗಿ ದೂರವಾಣಿ ಮೂಲಕ ಭರವಸೆ ನೀಡಿದ್ದರು. ಅಂತೆಯೇ ಮಂಗಳವಾರ ನಡೆದ ಬೀಗರ ಔತಣ ಕೂಟದಲ್ಲಿ ಪಾಲ್ಗೊಂಡು ಅಭಿಮಾನಿ ಆಸೆ ಪೂರೈಸಿದರು.
ಆನಂತರ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ ಒಂದೇ ದಿನದಲ್ಲಿ ಮೈಸೂರಿನಿಂದ ಬೆಂಗಳೂರಿನ ತನಕ ದಿನಕ್ಕೆ 50ಕ್ಕಿಂತ ಹೆಚ್ಚು ಮದುವೆಗಳಿಗೆ ಹಾಜರಾಗುತ್ತಿದ್ದೆ. ಆದರೆ, ಈಗ ಆರೋಗ್ಯ ಸಮಸ್ಯೆ ಮತ್ತು ಪಕ್ಷದ ಕಾರ್ಯಕ್ರಮಗಳಿಂದಾಗಿ ಸಾಧ್ಯವಾಗುತ್ತಿಲ್ಲ ಎಂದರು.
ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ತನ್ನ ಮೇಲೆ ಅಭಿಮಾನವಿಟ್ಟು ಮದುವೆಗೆ ಬರಲೇಬೇಕೆಂದು ಹಠಮಾಡುತ್ತಾರೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ತನಗೆ ಕೆಲಸದ ಒತ್ತಡವಿದ್ದು ಎಲ್ಲ ಮದುವೆಗಳಿಗೆ ಬರುವುದಕ್ಕಾಗುವುದಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದ ರೈತರ ಹಿತದೃಷ್ಠಿಯಿಂದ ಜನಪರ ಹೋರಾಟ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಕೈಜೋಡಿಸಬೇಕು. ಮುಂದೆ ಯಾರು ಕೂಡ ಮದುವೆಗೆ ಬರಲೇಬೇಕೆಂಬ ಒತ್ತಡ ಹಾಕಬೇಡಿ. ಮದುವೆಗೆ ಬಾರದಿದ್ದರೂ ಈ ರೀತಿ ಸತ್ಯಾಗ್ರಹ ಧರಣಿಗಳನ್ನು ನಡೆಸಬೇಡಿ. ಮುಂದೆ ಯಾವಾಗಲಾದರೂ ಬಂದು ಆಶೀರ್ವಾದ ಮಾಡುತ್ತೇನೆ ಎಂದು ಅವರು ಕೋರಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಕೆ.ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ, ಮುಖಂಡ ತೋಪ್ಪನಹಳ್ಳಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.







