ಜಿಎಸ್‌ಟಿಯಿಂದ ಮಧ್ಯಮ ವ್ಯಾಪಾರಿಗಳಿಗೆ ನಷ್ಟ: ಪುಟ್ಟಮಾದು ಆಕ್ರೋಶ

ಮಂಡ್ಯ, ಡಿ.5: ಜಿಎಸ್‌ಟಿಯಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಬಹಳಷ್ಟು ನಷ್ಟವಾಗಲು ಕೇಂದ್ರ ಸರಕಾರ ಕಾರಣವೆಂದು ಸಿಪಿಐ(ಎಂ) ಮುಖಂಡ ಎಂ.ಪುಟ್ಟಮಾದು ಆರೋಪಿಸಿದರು.
ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ ಮಳವಳ್ಳಿ ಮುಖ್ಯರಸ್ತೆಯಲ್ಲಿ ಪ್ರಾಂತಕೃಷಿ ಕೂಲಿಕಾರರ ಸಂಘದ ಕಚೇರಿಯ ಮುಂಭಾಗದಲ್ಲಿ ನಡೆದ ಸಿಪಿಐ(ಎಂ) ಸಮ್ಮೇಳನ ಹಾಗೂ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಅವರು, ಕಳೆದ ಮೂರು ವರ್ಷಗಳಿಂದ ಒಳ್ಳೆಯ ದಿನವನ್ನು ತರುತ್ತೇವೆಂದು ಹೇಳಿ ನೋಟು ಅಮಾನೀಕರಣ, ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಕೆಟ್ಟ ದಿನಗಳನ್ನೇ ಜನಗಳ ಮೇಲೆ ಹೇರಿದ್ದಾರೆಂದು ಕಿಡಿಕಾರಿದರು.
ನರೇಂದ್ರಮೋದಿ 3.50 ಲಕ್ಷ ಕೋಟಿ ರೂ. ಕಪ್ಪು ಹಣವನ್ನು ಹೊರತಂದು ಪ್ರತೀ ಬಡಕುಟುಂಬಕ್ಕೂ ಆ ಹಣವನ್ನು ನೀಡುತ್ತೇವೆಂದು ಹೇಳಿ ಸುಮ್ಮನಿದ್ದಾರೆ. ಇದೆಲ್ಲ ರಾಜಕೀಯ ಬೆಳವಣಿಗೆಯ ಮಾತುಗಳಾಗಿವೆ ಎಂದು ಅವರು ಟೀಕಿಸಿಸದರು.
ಗ್ಯಾಸ್ ಸಬ್ಸಿಡಿಯನ್ನು ರದ್ದುಗೊಳಿಸಿವೆ. ಕೃಷಿ ಉಪಕರಣಗಳ ಬೆಲೆ ತಾರಕಕ್ಕೇರಿದೆ. ಇದರಿಂದ ಕೃಷಿ ಬಿಕ್ಕಟ್ಟು ಉಂಟಾಗಿ ರೈತರು ಪ್ರತಿದಿನ ಆತ್ಮಹತ್ಯೆಗೆೆ ಶರಣಾಗುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ರಹಿತರಿಗೆ ಮನೆಯನ್ನೇ ನೀಡಿಲ್ಲ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸಿಲ್ಲ. ಕೃಷಿಕೂಲಿಕಾರರಿಗೆ ಸಮರ್ಪಕ ಕೆಲಸ ನೀಡಿಲ್ಲ. ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿಲ್ಲ ಎಂದು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ ಮಾತನಾಡಿ, ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಅಗತ್ಯವಸ್ತುಗಳ ಬೆಲೆ ಏರಿಕೆಗೊಳಿಸುತ್ತಿದೆ. ಅದರಲ್ಲೂ ಮಹಿಳಾ ಉಪಯೋಗಿ ಅಡುಗೆ ಅನಿಲದ ಬೆಲೆಯನ್ನು ಇಳಿಕೆ ಮಾಡದಿದ್ದರೆ ರಾಜ್ಯದ ಮಹಿಳೆಯರೆಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಂತ ರೈತಸಂಘದ ಮುಖಂಡ ಟಿ. ಯಶ್ವಂತ್, ಕೃಷಿಕೂಲಿಕಾರರ ಸಂಘದ ಹನುಮೇಶ್, ಜನವಾದಿ ಮಹಿಳಾ ಸಂಘಟನೆಯ ಡಿ.ಕೆ.ಶೋಭಾ, ಸಿದ್ದರಾಜು, ಚಂದ್ರಣ್ಣ, ವಿಷಕಂಠೇಗೌಡ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.







