ಮುಖ್ಯಮಂತ್ರಿ ಸಮಾವೇಶಕ್ಕೆ ಸಿದ್ಧಗೊಂಡ ಭಟ್ಕಳ: ಬಿಗಿ ಪೊಲೀಸ್ ಬಂದೋಬಸ್ತ್
.jpg)
ಭಟ್ಕಳ, ಡಿ. 5: ಭಟ್ಕಳದ ಪೊಲೀಸ್ ಪರೇಡ್ ಮೈದಾನದಲ್ಲಿ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 6ರಂದು ಭಟ್ಕಳಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು, ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಪಕ್ಷ ಸಲಕ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಂಗಳವಾರ ಜಿಲ್ಲಾಧಿಕಾರಿ ಎಸ್.ನಕುಲ್ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯದ ಪರಿಶೀಲನೆಯನ್ನು ನಡೆಸಿದ್ದಾರೆ. ಹೆದ್ದಾರಿ ಇಕ್ಕೆಗಳಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ಬ್ಯಾನರ್ಸ್ ಗಳು ಬಟ್ಟಿಂಗ್ಸ್ ಗಳು ರಾರಾಜಿಸುತ್ತಿವೆ.
ಸರಕಾರಿ ಅಧಿಕಾರಿಗಳ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಸುಮಾರು 20 ಸಾವಿರ ಜನರು ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲವಾಗುವಂತೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಂದವರೆಲ್ಲರಿಗೂ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದೊಂದಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಶಾಸಕ ಮಂಕಾಳು ವೈದ್ಯ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಕಳೆದ 2-3 ದಿನಗಳಿಂದ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ತಾಲೂಕಿನಾದ್ಯಂತ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ವಿವಿಧೆಡೆಯಿಂದ 500ಕ್ಕೂ ಪೊಲೀಸ್ ಸಿಬ್ಬಂದಿಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಒಖಿ ಭೀತಿ: ಬುಧವಾರ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣಗೊಂಡಿರುವಂತೆಯೇ ಗಾಳಿ, ಮಳೆಯ ವಾತಾವರಣ ಸಂಘಟಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈಗಾಗಲೇ ಇಡೀ ಪೊಲೀಸ್ ಮೈದಾನವನ್ನು ಶ್ಯಾಮಿಯಾನ ಸುತ್ತುವರೆದಿದ್ದು, ಮಳೆ ಬಂದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎದುರಾಗಿದೆ. ಇದರ ನಡುವೆಯೇ ಬುಧವಾರದ ಬೆಳಗ್ಗೆಯ ಹೊತ್ತಿಗೆ ವಾತಾವರಣ ಶಾಂತವಾಗಬಹುದು ಎಂಬ ಆಶಾಭಾವನೆಯೂ ವ್ಯಕ್ತವಾಗುತ್ತಿದೆ.







