ಆಸ್ಟ್ರೇಲಿಯದಲ್ಲಿ ಆಹಾರವಿಲ್ಲದೇ ಭಾರತದ ಬಾಲಕಿಯರ ಹಾಕಿ ತಂಡ ಪರದಾಟ
ತನಿಖೆಗೆ ಆದೇಶಿಸಿದ ಕೇಂದ್ರ

ಹೊಸದಿಲ್ಲಿ, ಡಿ.5: ಪೆಸಿಫಿಕ್ ಸ್ಕೂಲ್ ಗೇಮ್ಸ್ ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಕ್ಕೆ ತೆರಳಿರುವ ಭಾರತದ ಬಾಲಕಿಯರ ಹಾಕಿ ತಂಡಕ್ಕೆ ಕೇಂದ್ರ ಸರಕಾರ ಪಂದ್ಯದ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿಲ್ಲ. ಮೂಲಭೂತ ವ್ಯವಸ್ಥೆಗಳಾದ ಊಟೋಪಚಾರ ಹಾಗೂ ಸಾರಿಗೆ ವ್ಯವಸ್ಥೆಯನ್ನು ಮಾಡದೇ ದಿವ್ಯ ನಿರ್ಲಕ್ಷ ತೋರಿದೆ.
ಭಾರತದ ಆಟಗಾರ್ತಿಯರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಮೂಲಕ ಕೇಂದ್ರ ಸರಕಾರದ ನಿರ್ಲಕ್ಷದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಈ ವೀಡಿಯೊ ಸಂಚಲನ ಮೂಡಿಸಿದೆ. ಕೋಚ್ ಪ್ರದೀಪ್ ಕುಮಾರ್ ವೀಡಿಯೊದಲ್ಲಿ ಹೇಳಿರುವಂತೆ ಭಾರತದ ಶಾಲಾ ಬಾಲಕಿಯರಿಗೆ ವಿದೇಶದಲ್ಲಿ ಪ್ರವಾಸಕೈಗೊಳ್ಳಲು ತಾವಾಗಲಿ ಹಾಗೂ ಹಾಕಿ ಇಂಡಿಯಾವಾಗಲಿ ಅನುಮತಿ ನೀಡಿಲ್ಲ ಎಂದು ಹೇಳಿರುವ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಸಾಯ್ ಹೇಳಿಕೆಗೆ ಧ್ವನಿಗೂಡಿಸಿರುವ ಹಾಕಿ ಇಂಡಿಯಾ, ಭಾರತದ ಯಾವುದೇ ತಂಡವನ್ನು ವಿದೇಶಕ್ಕೆ ಕಳುಹಿಸಿಕೊಟ್ಟಿಲ್ಲ ಎಂದು ಟ್ವೀಟ್ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರದ ನಿರ್ಲಕ್ಷದ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತವಾದ ತಕ್ಷಣ ಎಚ್ಚೆತ್ತುಕೊಂಡಿರುವ ಸ್ವತಃ ಕ್ರೀಡಾಪಟುವಾಗಿರುವ ಕ್ರೀಡಾ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಸ್ಟ್ರೇಲಿಯಕ್ಕೆ ತೆರಳಿರುವ ಬಾಲಕಿಯರು ಭಾರತದ ಅಧಿಕಾರಿಗಳ ನಿರ್ಲಕ್ಷತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಮಗೆ ಪಂದ್ಯದ ವೇಳಾಪಟ್ಟಿಯ ಅರಿವಿಲ್ಲದ ಕಾರಣ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು. ನಮಗೆ ಊಟ-ತಿಂಡಿಯ ವ್ಯವಸ್ಥೆಯನ್ನಾಗಲಿ, ಸಾರಿಗೆ ವ್ಯವಸ್ಥೆಯನ್ನಾಗಲಿ ಮಾಡಿಲ್ಲ. ಸ್ಪರ್ಧೆ ನಡೆದ ಸ್ಥಳಕ್ಕೆ ತಲುಪಲು ನಾವೇ ಕ್ಯಾಬ್‌ನ್ನು ಬುಕ್ ಮಾಡಿದ್ದೆವು ಎಂದು ಓರ್ವ ಬಾಲಕಿ ಸಮಸ್ಯೆ ಬಿಚ್ಚಿಟ್ಟಿದ್ದಾಳೆ.
ಭಾರತ ವಿವಿಧ ಶಾಲೆಗಳ ತಂಡಗಳು ಆಸ್ಟ್ರೇಲಿಯ ಶಾಲಾ ತಂಡಗಳ ವಿರುದ್ಧ ಆಡಲಿವೆ. ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಈ ಗೇಮ್ಸ್‌ನ್ನು ಆಯೋಜಿಸಿದೆ. ಈ ಸಂಸ್ಥೆಯು ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆ ಹಾಗೂ ಅಂತಾರಾಷ್ಟ್ರೀಯ ಶಾಲಾ ಕ್ರೀಡಾ ಫೆಡರೇಶನ್‌ನಿಂದ ಗುರುತಿಸಲ್ಪಟ್ಟಿದೆ.







