ಎಸೆಸೆಲ್ಸಿ ವಿದ್ಯಾರ್ಥಿಗಳ ನೋಂದಣಿ ಅವ್ಯವಸ್ಥೆ ಸರಿಪಡಿಸಲು ಶಿಕ್ಷಣ ಸಚಿವರಿಗೆ ಬಸವರಾಜ ಹೊರಟ್ಟಿ ಆಗ್ರಹ
ಬೆಂಗಳೂರು, ಡಿ. 6: ಎಸೆಸೆಲ್ಸಿ ವಿದ್ಯಾರ್ಥಿಗಳ ನೋಂದಣಿ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ನ.27ರಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿಗೆ ಪತ್ರ ಬರೆದು ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದ್ದೆ. ಆದರೆ, ನಿರ್ದೇಶಕರು ಜಾಣ ವೌನಕ್ಕೆ ಜಾರಿದ್ದರಿಂದ ಅನಿವಾರ್ಯವಾಗಿ ತಮಗೆ ಪತ್ರ ಬರೆಯಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್‌ಗೆ ವಿಧಾನಪರಿಷತ್ ಸದಸ್ಯ ಬಸವರಾಜಹೊರಟ್ಟಿ ತಿಳಿಸಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 2018ರ ನೋಂದಣಿಯನ್ನು ಆನ್‌ಲೈನ್ ಮೂಲಕ ಮಾಡುವ ಪ್ರಕ್ರಿಯೆ ಆರಂಭವಾದಾಗಿನಿಂದ ವೆಬ್‌ಸೈಟ್‌ಗೆ ಮಾಹಿತಿ ಅಪಲೋಡ್ ಆಗುತ್ತಿಲ್ಲ. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದನ್ನು ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಹಳೆಯ ಪದ್ಧತಿಯಲ್ಲಿ ಅಕ್ಟೋಬರ್‌ನಲ್ಲಿ ಓಎಂಆರ್ ಸೀಟುಗಳನ್ನು ಶಾಲೆಗಳಿಗೆ ಕಳುಹಿಸಿ ವಿದ್ಯಾರ್ಥಿಗಳಿಂದ ಭರ್ತಿ ಮಾಡಿಸಿ ಕಳುಹಿಸುವ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಈ ಪದ್ಧತಿಯಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸರಿಯಾದ ಸಮಯದಲ್ಲಿ ಪರೀಕ್ಷಾ ಫಾರಂಗಳನ್ನು ತುಂಬಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ, ಈ ವರ್ಷ ಎಸ್.ಎ.ಟಿ.ಎಸ್. ಅಂದರೆ ಸ್ಟುಡೆಂಟ್ ಟ್ರ್ಯಾಕಿಂಗ್‌ಗಾಗಿ ಸಿದ್ಧಪಡಿಸಿದ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಲು ನಿರ್ಧರಿಸಿದ ಪರೀಕ್ಷಾ ಮಂಡಳಿಯ ದುಡುಕಿನ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗೊಂದಲಕ್ಕೆ ಈಡಾಗಿದ್ದಾರೆ. ಅಲ್ಲದೇ ಫಾರಂ ತುಂಬಲು ರಾತ್ರಿಯವರೆಗೆ ಕಾದರೂ ಮಾಹಿತಿ ಅಪ್‌ಲೋಡ್ ಆಗುತ್ತಿಲ್ಲ ಎಂದು ಬಸವರಾಜಹೊರಟ್ಟಿ ತಿಳಿಸಿದ್ದಾರೆ.
ಅಲ್ಲದೆ, ಹೆಚ್ಚುವರಿ ಮಾಹಿತಿಯನ್ನು ಇದೇ ವೆಬ್‌ಸೈಟಿನ ಮೂಲಕ ಅಪ್‌ಲೋಡ್ ಮಾಡಬೇಕಾಗಿದೆ. ಆದುದರಿಂದ, ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಪಾಠ ಬೋಧನೆ ಮಾಡುವದನ್ನು ಬಿಟ್ಟು ಕಂಪ್ಯೂಟರ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಲು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಮಸ್ಯೆಯ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸುವುದರೊಂದಿಗೆ ಪರಿಣಾಮಕಾರಿ ಪರಿಹಾರ ಸಿಗದಿದ್ದರೆ ಹಿಂದಿನ ಪದ್ಧತಿಯನ್ನೆ ಅಳವಡಿಸಿಕೊಳ್ಳಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸುವಂತೆ ಬಸವರಾಜ ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.







