ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ: ಶಾಸಕ ಮಧು ಬಂಗಾರಪ್ಪ

ಸೊರಬ, ಡಿ. 6: ಕಳೆದ ನಾಲ್ಕೂವರೆ ವರ್ಷದಲ್ಲಿ ಎಲ್ಲ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಯಾವುದೇ ಪಕ್ಷಭೇದ ಮಾಡದೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ತಾಲ್ಲೂಕಿನ ಕಾಸ್ವಾಡಿಕೊಪ್ಪ, ಕೊಡಕಣಿ ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದ ಶಾಸಕನಾಗಿದ್ದರೂ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಮರ್ಪಕ ಅನುದಾನ ತಂದು ಅಭಿವೃದ್ಧಿಪಡಿಸಿರುವುದು ನನಗೆ ಮುಂಬರುವ ಚುನಾವಣೆಗೆ ಶ್ರೀರಕ್ಷೆಯಾಗಲಿದೆ. ನನ್ನ ಅಭಿವೃದ್ಧಿ ಕೆಲಸ ಹಾಗೂ ನಾಯಕತ್ವವನ್ನು ಒಪ್ಪಿ ಬಿಜೆಪಿಯ ತಾಲ್ಲೂಕು ಪಂಚಾಯ್ತಿ ನಾಲ್ಕು ಸದಸ್ಯರು ಯಾವುದೇ ಆಮಿಷಗಳಿಗೆ ಒಳಗಾಗದೆ ಜೆಡಿಎಸ್ ಸೇರಿದ್ದಾರೆ ಎಂದರು.
ತಾಲ್ಲೂಕಿನಾದ್ಯಂತ ನೂರಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಇವುಗಳ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಮತ್ತು ಚಾಲನೆಯಲ್ಲಿರುವ ಕಾಮಗಾರಿಗಳನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಶಿಕಾರಿಪುರ ಶಾಸಕ ಬಿ.ವೈ,ರಾಘವೇಂದ್ರ ಮತ್ತೊಬ್ಬರ ನಾಯಕತ್ವದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಒಮ್ಮೆ ತಾಲೂಕಿನಲ್ಲಿ ಪ್ರವಾಸ ಮಾಡಿಬಂದರೆ ಆಗಿರುವ ಅಭಿವೃದ್ಧಿüಯ ಅರಿವಾಗಲಿದ್ದು, ಜನರೇ ಉತ್ತರಿಸುವ ಜೊತೆಗೆ ರಾಘವೇಂದ್ರ ಅವರಿಗೆ ನಿಜವಾದ ಉತ್ತರ ಚುನಾವಣೆಯಲ್ಲಿ ದೊರೆಯಲಿದೆ ಎಂದರು.
ಕೊಡಕಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗರತ್ನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಎಲ್.ಜಿ.ರಾಜಶೇಖರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯ ಬಂಗಾರಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಚಿನ್ನಪ್ಪ, ಶಿವಕುಮಾರ್ ಕಾಸ್ವಾಡಿಕೊಪ್ಪ, ಗೂಳಿ ಹೂವಪ್ಪ, ಕೃಷ್ಣಮೂರ್ತಿ, ನೆಹರು, ಗಣಪತಿ ಹುಲ್ತಿಕೊಪ್ಪ, ಸುಧಾ, ನಾಗಪ್ಪ ಕಾಸ್ವಾಡಿಕೊಪ್ಪ.ಪಾಂಡು ಕೊಡಕಣಿ ಹಾಜರಿದ್ದರು.







