'ತುಳುನಾಡೋಚ್ಚಯ -2017' : ಪುತ್ತೂರಿನಲ್ಲಿ ಸಹಿ ಸಂಗ್ರಹ ಅಭಿಯಾನ
'ತುಳು' ಭಾಷೆ ನಾಡಿನ ಅಭಿಮಾನದ ಭಾಷೆ: ಸುಧಾಕರ ಶೆಟ್ಟಿ

ಪುತ್ತೂರು,ಡಿ.6: ತುಳು ಭಾಷೆಗೆ ತನ್ನದೇ ಆದ ಮಾನ್ಯತೆಯಿದೆ.ಎಲ್ಲರಲ್ಲೂ ಹುದುಗಿಕೊಳ್ಳುವ ಮನಸ್ಸು ಆ ಭಾಷೆಗಿರುವುದರಂದ ತುಳುನಾಡಿನ ಅಭಿಮಾನದ ಭಾಷೆಯಾಗಿದೆ. ಇದನ್ನು ಬೆಳೆಸುವ ನಿಟ್ಟಿನಲ್ಲಿ ತುಳುನಾಡೋಚ್ಚಯ ಹಬ್ಬ ಪೂರಕವಾಗಿದೆ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಹೇಳಿದರು.
ವಿಶ್ವತುಳುವೆರೆ ಆಯನೊ ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಮುದ್ರಾಡಿ ನಾಟ್ಕದೂರು ಮತ್ತು ನಮ ತುಳುವೆರ್ ಕಲಾಸಂಘಟನೆ ನೇತೃತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆ, ಸುಮನಸಾ ಕೊಡವೂರು, ಉಡುಪಿ ಹಾಗೂ ವಿವಿಧ ಕೂಟಗಳ ಸಹಕಾರದಿಂದ ಪಿಲಿಕುಳ ತುಳು ಸಂಸ್ಕøತಿ ಗ್ರಾಮದಲ್ಲಿ ಡಿ. 23,24ರಂದು ನಡೆಯುವ "ತುಳುನಾಡೋಚ್ಚಯ -2017" ಸಮಾರಂಭಕ್ಕೆ ಪೂರ್ವಭಾವಿಯಾಗಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಎದುರು ಗದ್ದೆಯಲ್ಲಿ ಬುಧವಾರ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಳು ಮೃದುತ್ವಕ್ಕೆ ಹೆಸರಾದ ಭಾಷೆಯಾಗಿದ್ದು, ತುಳು ಜನರು ಮಾನವೀಯ ಮೌಲ್ಯಗಳ ಹರಿಕಾರರು. ಈ ಹಿನ್ನಲೆಯಲ್ಲಿ ವಿವೇಕಯುತ ತುಳು ಭಾಷೆಗೆ ಪ್ರಾಧಾನ್ಯತೆ ದೊರಕಬೇಕು. ತುಳುನಾಡೋಚ್ಚಯ ಹಬ್ಬದ ಮುಖಾಂತರ ತುಳು ಎಲ್ಲೆಡೆ ಪಸರಿಸಲಿ. ತುಳು ಕೇವಲ ಭಾಷೆಯಲ್ಲ. ಅದೊಂದು ಸಂಸ್ಕøತಿ ಬಿನ್ನಾಣದ ಮೆರುಗಾಗಿದೆ ಎಂದರು.
ಪುತ್ತೂರು ತುಳು ಕೂಟದ ಅಧ್ಯಕ್ಷರಾದ ಪೂವರಿ ತುಳು ಮಾಸ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಹೆಬ್ಬಾರಬೈಲು ಮಾತನಾಡಿ ತುಳು ಭಾಷೆ ಉಳಿಯಬೇಕಾದರೆ ತಳಮಟ್ಟದಿಂದಲೇ ಅದರ ಅಭಿಯಾನ ಆರಂಭವಾಗಬೇಕು. ತುಳು ನಾಡಿನ ಮೂಲ ತುಳು ಲಿಪಿ, ತುಳು ಮಾಧ್ಯಮ, ತುಳು ಶಿಕ್ಷಣದ ಮೂಲಕ ತುಳು ಭಾಷೆಯನ್ನು ಉಳಿಸುವ ಕಾರ್ಯವಾಗುತ್ತಿದೆ. ಆದರೆ ತುಳು ನಾಡಿನ ಪರಂಪರೆ ಉಳಿಯುವುದರೊಂದಿಗೆ ತುಳು ಅಭಿಮಾನವು ಹೆಚ್ಚಾಗಬೇಕು. ಇದಕ್ಕೆ ತುಳುನಾಡಚ್ಚಯ-2017 ಪ್ರಮುಖ ದಾರಿಯಾಗಲಿದೆ. ತುಳು ಭಾಷೆ ಸಂವಿಧಾನ ಪರಿಚ್ಚೇದ 8 ಕ್ಕೆ ಸೇರ್ಪಡೆಯಾಗಬೇಕೆಂದು ಹಲವು ವರ್ಷದ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಬೇಕು. ಮನೆಯಿಂದಲೇ ತುಳು ಅಭಿಯಾನ ಆರಂಭವಾದರೆ ಪೂರ್ಣ ಮಟ್ಟದ ಅಭಿವೃದ್ಧಿ ಖಂಡಿತ. ತುಳು ವಿಸ್ತಾರವಾಗಿ ಜನರೊಂದಿಗೆ ಬೆರೆತಾಗ ಮಾತ್ರ ಆ ಭಾಷೆಗೆ ಮಾನ್ಯತೆ ದೊರೆಯುತ್ತದೆ. ಇದು ತುಳುನಾಡಚ್ಚಯ ಸಂಕಲ್ಪವಾಗಿದೆ ಎಂದರು.
ತುಳುನಾಡೋಚ್ಚಯದ ಸಂಚಾಲಕರಾದ ನಮ್ಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ ಮೋಹನ ಮುದ್ರಾಡಿ ಮಾತನಾಡಿ ತುಳುನಾಡೋಚ್ಚಯ 2017 ಮೂಲಕ ತುಳು ಅಭಿಮಾನಿಗಳು ಒಂದುಗೂಡಿ ಸಹಿ ಸಂಗ್ರಹಣೆಯ ಮೂಲಕ ತುಳು ಭಾಷೆಗೆ ಜೀವ ತುಂಬಿಸುವ ಕೆಲಸ ಮಾಡುವುದರೊಂದಿಗೆ ತುಳುಭಾಷೆಯನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ. ಉಡುಪಿ ಪೇಜಾವರ ಮಠಾಧೀಶರಾದ ವಿಶ್ವೇಶ್ವತೀರ್ಥ ಶ್ರೀ ಪಾದರು ಪ್ರಥಮವಾಗಿ ಸಹಿ ಹಾಕುವ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ತುಳುಭಾಷೆಯು ಸಂಸ್ಕೃತಿ ಹಾಗೂ ಸಾಹಿತ್ಯದಿಂದ ಹೊರತಾದ ವ್ಯಕ್ತಿ ಬದುಕಿನ ಅನಾವರಣವಾಗಿದೆ. ತುಳುನಾಡ ಅಭಿವೃದ್ದಿ ಪ್ರಾಧಿಕಾರದ ಸ್ಥಾಪನೆ, ಮಂಗಳೂರು ಉಚ್ಚನ್ಯಾಯಾಲಯ ಪೀಠ ಆರಂಭ, ಕಾಸರಗೋಡು-ಕರ್ನಾಟಕಕ್ಕೆ ಸೇರಬೇಕೆಂಬ ಒತ್ತಾಯಗಳನ್ನು ಮುಂದಿಟ್ಟಕೊಂಡು ತುಳುನಾಡೋಚ್ಚಯ ಮುಂದೆ ಸಾಗಲಿದೆ ಎಂದರು.
ತುಳುಕೂಟ ಮಾಜಿ ಅಧ್ಯಕ್ಷ ಐ.ಕೆ ಬೊಳುವಾರು, ಕರ್ನಾಟಕ ತುಳು ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ಘಟಕ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ, ತುಳು ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಸಂತೋಷ್ ರೈ ಬೈಲುಗುತ್ತು ಶುಭಹಾರೈಸಿದರು. ಬಳಿಕ ಪುತ್ತೂರು ನಗರದಲ್ಲಿ ಸಹಿ ಸಂಗ್ರಹಣಾ ಅಭಿಯಾನ ನಡೆಯಿತು.







