ಚೆನ್ನೈ ಸೂಪರ್ ಕಿಂಗ್ಸ್‌ಗೆ ಧೋನಿ ವಾಪಸ್?
.jpeg)
ಹೊಸದಿಲ್ಲಿ, ಡಿ.6: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳಿಗೆ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಮೂವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಲು ಐಪಿಎಲ್ ಆಡಳಿತ ಮಂಡಳಿ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಎಂ.ಎಸ್. ಧೋನಿ 2018ರ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುವುದು ಬಹುತೇಕ ದೃಢಪಟ್ಟಿದೆ.
ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಯೊಂದಿಗೆ ಬುಧವಾರ ಮಹತ್ವದ ಸಭೆ ನಡೆಸಿರುವ ಐಪಿಎಲ್ ಆಡಳಿತ ಸಮಿತಿ, ಐಪಿಎಲ್ ಆಟಗಾರರನ್ನು ಉಳಿಸಿಕೊಳ್ಳುವ ಪದ್ಧತಿ, ವೇತನ ನಿಗದಿಪಡಿಸುವುದು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿದೆ.
ಚೆನ್ನೈ ಹಾಗೂ ರಾಜಸ್ಥಾನ ಫ್ರಾಂಚೈಸಿಗಳಿಗೆ 2015ರ ತಂಡದಲ್ಲಿದ್ದ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಫ್ರಾಂಚೈಸಿಗಳು ಐವರು ಆಟಗಾರರನ್ನು ಮರಳಿ ಖರೀದಿಸುವ ವೇಳೆ ಭಾರತದ ಮೂವರು ಹಾಗೂ ವಿದೇಶದ ಇಬ್ಬರು ಆಟಗಾರರಿಗೆ ಆದ್ಯತೆ ನೀಡಬೇಕು. ಒಂದು ವೇಳೆ ಫ್ರಾಂಚೈಸಿಗಳು ಯಾವುದೇ ಆಟಗಾರರನ್ನು ಉಳಿಸಿಕೊಳ್ಳದಿದ್ದರೆ 2018ರಲ್ಲಿ ಮೂರು ಮ್ಯಾಚಿಂಗ್ ಕಾರ್ಡ್‌ಗಳನ್ನು ಪಡೆಯಲಿದೆ.
ಪ್ರತಿ ಫ್ರಾಂಚೈಸಿಗಳಿಗೆ ಗರಿಷ್ಠ 25 ಆಟಗಾರರು(8 ವಿದೇಶಿಗರು) ಹಾಗೂ ಕನಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಆಟಗಾರರ ವೇತನ ಮಿತಿಯನ್ನು 2017ಕ್ಕೆ 80 ಕೋ.ರೂ., 2019ಕ್ಕೆ 82 ಕೋ.ರೂ. ಹಾಗೂ 2020ಕ್ಕೆ 85 ಕೋ.ರೂ. ನಿಗದಿಪಡಿಸಲಾಗಿದೆ. ಹೊಸ ಕ್ರಿಕೆಟಿಗರಿಗೆ ಗರಿಷ್ಠ 40 ಲಕ್ಷ ರೂ. ನಿಗದಿಪಡಿಸಲಾಗಿದೆ.







