ಸಂವಿಧಾನದ ಆಶಯಕ್ಕೆ ಧಕ್ಕೆಯಾದರೆ ದೇಶಕ್ಕೆ ಗಂಡಾಂತರ: ಜಯನ್ ಮಲ್ಪೆ

ಮಲ್ಪೆ, ಡಿ.6: ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಗಳು ಬದುಕಿನಾ ಧಾರವಾಗಬೇಕೆಂಬ ಉದೇಶದಿಂದ ಮತ್ತು ದೇಶದ ಭವ್ಯ ಪರಂಪರೆಗಾಗಿ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಕ್ಕೆ ಧಕ್ಕೆಯಾದರೆ ಈ ದೇಶಕ್ಕೆ ಗಂಢಾಂತರ ಎದುರಾಗಲಿದೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಎಚ್ಚರಿಸಿದ್ದಾರೆ.
ಅಂಬೇಡ್ಕರ್ ಯುವಸೇನೆ ಇಂದು ಮಲ್ಪೆಯಲ್ಲಿ ಆಯೋಜಿಸಲಾದ ಡಾ.ಬಿ. ಆರ್.ಅಂಬೇಡ್ಕರ್‌ರವರ 61ನೆ ಮಹಾ ಪರಿನಿರ್ವಾಣ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ರಾಜಕೀಯದಲ್ಲಿ ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಒಂದು ಮೌಲ್ಯವನ್ನು ಪರಿಗಣಿಸಲಾಗುತ್ತದೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಈ ವೌಲ್ಯವೆಂಬ ತತ್ವವನ್ನು ನಿರಾಕರಿಸಲಾಗಿದೆ. ಹಾಗಾಗಿ ಅಂಬೇಡ್ಕರ್ ಕನಸು ಕಂಡ ಸಮಾಜವಾದಿ ಸಂವಿಧಾನವನ್ನು ಸಕಾರ ಮಾಡಲು ಮತ್ತೊಂದು ನೈಜ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸದೆ ಬೇರೇ ದಾರಿ ಇಲ್ಲ ಎಂದರು.
ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು ಮಾತನಾಡಿ, ಅಂಬೇಡ್ಕರ್ ರವರ ಸಂವಿಧಾನ ಒಪ್ಪದವರು ದೇಶಬಿಟ್ಟು ತೊಲಗಲಿ. ನಮಗೆ ರಾಮ ಮಂದಿರ ಬೇಡ, ಬಡತನ, ನಿರುದ್ಯೋಗ, ಹಸಿವು, ಅಸಮಾನತೆಗಳ ಸಮಸ್ಯೆಗೆ ಪರಿಹಾರಬೇಕು ಎಂದು ತಿಳಿಸಿದರು.
ನಗರಸಭಾ ಸದಸ್ಯ ಗಣೇಶ್ ನೆರ್ಗಿ ಮಾತನಾಡಿ, ಈ ನಾಡಿನಲ್ಲಿ ಬಹು ಜನರಾದ ದಲಿತರಿಗೂ ಮನುವಾದಿ ಪರದೇಶಿ ಬ್ರಾಹ್ಮಣರಿಗೂ ಕಳೆದ ನಾಲ್ಕೂ ಸಾವಿರ ವರ್ಷಗಳಿಂದ ಕದನ ನಡೆಯುತ್ತಲೇ ಇದೆ. ಈ ಕದನ ನಡೆಯುವುದೇ ರಾಜಕೀಯವನ್ನು ಗಳಿಸುವುದಕ್ಕಾಗಿ ಎಂಬುದನ್ನು ಮರೆಯಬೇಡಿ ಎಂದರು.
ಉಡುಪಿ ನಗರಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಉಡುಪಿ ಅಬಕಾರಿ ನಿರೀಕ್ಷಕ ನಿತ್ಯಾನಂದ, ದಲಿತ ಮುಖಂಡರಾದ ಸುರೇಶ್ ಪಾಲನ್, ವಸಂತ ತೊಟ್ಟಂ, ದೀಪಕ್ ಜಿ., ಪ್ರಮೀಳ, ವನಿತ, ರಾಮಚಂದ್ರ, ಅರುರ್ಣ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲಿಯಾನ್ ಸ್ವಾಗತಿಸಿ ದರು. ಪ್ರಸಾದ್ ನೆರ್ಗಿ ವಂದಿಸಿದರು. ಮೋಹಾಸ್ ಕಾರ್ಯಕ್ರಮ ನಿರೂಪಿಸಿದರು.







