ರಾಜ್ಯ ಮಟ್ಟದ ಪಶುಮೇಳ: ಎ.ಮಂಜು
ಬೆಂಗಳೂರು, ಡಿ.6: ರೈತರು ಕೃಷಿಗೆ ಪರ್ಯಾಯವಾಗಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವ ಹಿನ್ನೆಲೆಯಲ್ಲಿ 2018ರ ಜನವರಿ ಮೊದಲ ವಾರ ರಾಜ್ಯಮಟ್ಟದ ಪಶುಮೇಳ ನಡೆಸಲು ಉದ್ದೇಶಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈನುಗಾರಿಕೆ, ಮೀನು, ಹಂದಿ, ಮೊಲ, ಕುರಿ ಸಾಕಾಣಿಕೆಗೆ ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆ ಇದೆ. ಪಶುಸಂಗೋಪನೆ ಮತ್ತಷ್ಟು ಲಾಭದಾಯಕವಾಗಬೇಕಿದ್ದು, ಇದೇ ಕಾರಣಕ್ಕಾಗಿ ಜಗತ್ತಿನ ಹೊಸ ತಳಿಗಳ ಪರಿಚಯ ಮಾಡಿಕೊಡುವುದರಿಂದ ಹಿಡಿದು ಎಲ್ಲ ರೀತಿಯ ಮಾಹಿತಿಯನ್ನು ರೈತರಿಗೆ ಪಶು ಮೇಳದಲ್ಲಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೆಲ ಮೊಲ ಸಾಕಾಣಿಕೆದಾರರ ತಂತ್ರದಿಂದ ಮೊಲದ ಮಾಂಸಕ್ಕೆ ಸೂಕ್ತ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಪರಿಣಾಮವಾಗಿ ಕೆಲವೇ ಐಷಾರಾಮಿ ಹೊಟೇಲ್‌ಗಳಲ್ಲಿ ಮೊಲದ ಮಾಂಸದ ತಿನಿಸು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಕುರಿತು ಅವರ ಗಮನ ಸೆಳೆದಾಗ, ಈ ಕುರಿತು ಪರಿಶೀಲಿಸುವುದಾಗಿ ಎ.ಮಂಜು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ನಡೆದಿರುವ ಹೊಸ ಆವಿಷ್ಕಾರಗಳ ಕುರಿತು ಪಶುಮೇಳದಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಇದರಿಂದ ಹಾಲು, ಮಾಂಸದ ಉತ್ಪಾದನೆ ಹೆಚ್ಚಲಿದ್ದು, ಆ ಮೂಲಕ ಕೃಷಿಗೆ ನಷ್ಟ ಹೊಂದಿದರೂ ಪಶು ಸಂಗೋಪನೆ ರೈತರ ಕೈ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.







