ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ನೋಟಿಸ್
ಬೆಂಗಳೂರು, ಡಿ.6: ವ್ಯಕ್ತಿಯೊಬ್ಬನಿಗೆ ಪೊಲೀಸ್ ಆಯುಕ್ತರ ಹೆಸರಿನಲ್ಲಿ ವಿಚಾರಣೆಗೆ ಹಾಜರಾಗುವಂತೆ ಅನಾಮಿಕನೊಬ್ಬ ನಕಲಿ ನೋಟಿಸ್ ನೀಡಿರುವ ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮಲ್ಲೇಶ್ವರಂನಲ್ಲಿ ವಾಸವಾಗಿರುವ ಪುನೀತ್ ಎಂಬಾತನಿಗೆ ಮಲ್ಲೇಶ್ವರ ಎಸಿಪಿ ಆಯುಕ್ತರ ಹೆಸರನ್ನು ನಕಲಿ ನೋಟಿಸ್‌ನಲ್ಲಿ ಉಲ್ಲೇಖಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಈ ನೋಟಿಸ್ ಹಿಡಿದು ಮಲ್ಲೇಶ್ವರ ಎಸಿಪಿ ಕಚೇರಿಗೆ ಹೋದ ಪುನೀತ್ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾನೆ. ದಾಖಲೆಯಲ್ಲಿ ಮಲ್ಲೇಶ್ವರ ಪೊಲೀಸರ ಸಹಿ, ಸೀಲುಗಳನ್ನು ಬಳಕೆ ಮಾಡಲಾಗಿದೆ. ಪುನೀತ್ ಬಳಿ ಇದ್ದ ದಾಖಲೆಗಳನ್ನು ಕಂಡ ಪೊಲೀಸರು ಈ ರೀತಿ ಯಾವುದೇ ನೋಟಿಸ್ ನೀಡಿಲ್ಲ ವಿಚಾರಣೆಗೂ ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪುನೀತ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪೆನಿಗೂ ನೋಟಿಸ್ ಕಳುಹಿಸಲಾಗಿದೆ. ಇದರಿಂದ ಅತಂಕಕ್ಕೊಳಗಾದ ಪುನೀತ್ ಪೊಲೀಸ್ ಅಧಿಕಾರಿಗಳ ಬಳಿ ವಿಚಾರಣೆ ನಡೆಸಿದ್ದಾನೆ. ಇದು ಪೊಲೀಸರು ನೀಡಿರುವ ನೋಟಿಸ್ ಅಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಪುನೀತ್ ನಗರ ಆಯುಕ್ತರ ಕಚೇರಿಗೆ ಬಂದು ದೂರು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ.
ಪುನೀತ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಇತ್ತೀಚಿಗಷ್ಟೆ ಯುವತಿಗೆ ಮತ್ತೊಬ್ಬನೊಂದಿಗೆ ಮದುವೆಯಾಗಿತ್ತು. ಮದುವೆಯಾದ ನಂತರವು ಯುವತಿಯ ಬೆನ್ನ ಹಿಂದೆ ಬಿದ್ದಿದ್ದ ಎಂಬ ಕಾರಣಕ್ಕೆ ಅನಾಮಿಕನೊಬ್ಬ ನಕಲಿ ನೋಟಿಸ್ ನೀಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.







