ರಾಮ ಮಂದಿರ ವಿವಾದಕ್ಕೂ 2019ರ ಚುನಾವಣೆಗೂ ತಳುಕು ಹಾಕುತ್ತಿರುವುದೇಕೆ?: ಕಾಂಗ್ರೆಸ್‌ಗೆ ಮೋದಿ ತರಾಟೆ

ಹೊಸದಿಲ್ಲಿ, ಡಿ.6: ರಾಮ ಮಂದಿರ ವಿವಾದದಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಕ್ಕಾಗಿ ಬುಧವಾರ ಕಾಂಗ್ರೆಸ್ ನಾಯಕ ಮತ್ತು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಿಬಲ್ ಈ ಸೂಕ್ಷ್ಮ ವಿಷಯವನ್ನು 2019ರ ಸಾರ್ವತ್ರಿಕ ಚುನಾವಣೆಗಳೊಂದಿಗೆ ಏಕೆ ತಳುಕು ಹಾಕುತ್ತಿದ್ದಾರೆ, ಇಂತಹ ಯೋಚನೆ ಸರಿಯೇ ಎಂದು ಪ್ರಶ್ನಿಸಿದರು.
ಸಿಬಲ್ ಮಂಗಳವಾರ ಬಾಬ್ರಿ ಮಸೀದಿಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು. ಅದು ಅವರ ಹಕ್ಕು. ಆದರೆ ವಿಚಾರಣೆಯನ್ನು 2019ರವರೆಗೆ ಮುಂದೂಡುವಂತೆ ಹೇಳುವುದು ಅವರ ಹಕ್ಕೇ ಎಂದು ಗುಜರಾತ್‌ನ ಧಂಧುಕಾದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ ಪ್ರಶ್ನಿಸಿದರು.
ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿ ವಾದಿಸುತ್ತಿದ್ದ ಸಿಬಲ್ ಅವರು ‘ಗಂಭೀರ ರಾಜಕೀಯ ಪರಿಣಾಮಗಳನ್ನು’ ಉಲ್ಲೇಖಿಸಿ, 2019ರ ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಆದರೆ ಈ ಆಗ್ರಹವನ್ನು ತಳ್ಳಿಹಾಕಿದ ನ್ಯಾಯಾಲಯವು 2018,ಫೆ.8ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತ್ತು.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಸಿಬಲ್ ಅಹವಾಲಿನಿಂದ ಅಂತರವನ್ನು ಕಾಯ್ದಕೊಂಡಿರುವ ಸುನ್ನಿ ವಕ್ಫ್ ಮಂಡಳಿಯು, ರಾಮ ಮಂದಿರ ವಿವಾದವು ಶೀಘ್ರ ಬಗೆಹರಿಯಬೇಕೆಂದು ತಾನು ಬಯಸಿದ್ದೇನೆ ಎಂದು ಪುನರುಚ್ಚರಿಸಿದೆಯಲ್ಲದೆ, ತನಗೂ ಸಿಬಲ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಿಬಲ್ ಹೇಳಿಕೆಯಿಂದ ದೂರವಿರುವ ವಕ್ಫ್ ಮಂಡಳಿಯ ನಿರ್ಧಾರವನ್ನು ಪ್ರಶಂಸಿಸಿದ ಮೋದಿ, ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ವಿವಾದಕ್ಕೆ ಕಾಲ ನಿಗದಿತ ಪರಿಹಾರವನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.







