ಪತ್ರಕರ್ತ ರವಿ ಬೆಳಗೆರೆ, ಅನಿಲ್‌ರಾಜ್ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಡಿ.6: ಸದನ ಸಮಿತಿ ವಿಧಿಸಿರುವ ಜೈಲು ಶಿಕ್ಷೆ ತೀರ್ಪಿನ ಮೇಲೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸದನ ಸಮಿತಿ ವಿಧಿಸಿರುವ ಶಿಕ್ಷೆ ರದ್ದು ಕೋರಿ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ , ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ಆದೇಶ ಹೊರಡಿಸಿತು. ಬಂಧನಕ್ಕೆ ಹೊರಡಿಸಿರುವ ವಾರಂಟ್ ಜಾರಿಗೊಳಿಸದಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣವೇನು: ಶಾಸಕರ ಮಾನಹಾನಿ ವರದಿ ಪ್ರಕಟ ಸಂಬಂಧ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ವಿರುದ್ಧ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಲಾಗಿತ್ತು. ಈ ಕುರಿತು ವರದಿ ನೀಡಲು ಸದನ ಸಮಿತಿ ರಚಿಸಲಾಗಿತ್ತು.
ಉಭಯ ಪತ್ರಕರ್ತರ ವಿರುದ್ಧ ಜೈಲು ಶಿಕ್ಷೆ ಶಿಫಾರಸು ಮಾಡಿ ಸದನ ಸಮಿತಿ ವರದಿ ನೀಡಿತ್ತು. ಅದರಂತೆ ಸ್ಪೀಕರ್ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಬೆಳಗೆರೆ ಮತ್ತು ಅನಿಲ್‌ರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸದನಕ್ಕೆ ತೀರ್ಪು ಮರುಪರಿಶೀಲನೆ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಅದರಂತೆ ಮರುಪರಿಶೀಲನೆ ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಸದನ ಮಾನ್ಯ ಮಾಡದ ಕಾರಣ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.







