ಪ್ರತಾಪ್ ಸಿಂಹ, ಅನಂತ ಕುಮಾರ್ ಕೋಮು ಪ್ರಚೋದನೆ ದೇಶಕ್ಕೆ ಅಪಾಯಕಾರಿ: ಕರಿಯಣ್ಣ
ಚಿತ್ರದುರ್ಗ, ಡಿ.6: ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆ ಇವರು ಕೋಮು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದಾರೆ. ಇದು ದೇಶಕ್ಕೆ ಅಪಾಯಕಾರಿ ಎಂದು ಆಲ್ ಇಂಡಿಯಾ ಕಿಸಾನ್ ಸಭಾ ರಾಜ್ಯಾಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಹೇಳಿದ್ದಾರೆ.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ನಡೆದ ಹದಿಮೂರನೆ ತಾಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.
ದೇಶದ ಪ್ರಧಾನಿ ಮೋದಿ ಅಪ್ಪಟ ಸುಳ್ಳುಗಾರ. ರೈತರು, ಕಾರ್ಮಿಕರ ಶೋಷಣೆ ನಿಲ್ಲಬೇಕು. ರೈತರ ಸಾಲ ಮನ್ನಾ ಆಗಬೇಕು. ಭದ್ರಾ ಮೇಲ್ದಂಡೆ ಯೋಜನೆ ಆಮೆ ನಡಿಗೆಯಂತೆ ಸಾಗುತ್ತಿದ್ದು, ಪರಿಹಾರ ಕಾಣಬೇಕು. ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆ ಕೋಮು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದಾರೆ. ಇದು ದೇಶಕ್ಕೆ ಅಪಾಯಕಾರಿ ಎಂದು ಅವರು ಟೀಕಿಸಿದರು.
ಬಡವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಆಗುತ್ತಿಲ್ಲ. ದೇಶಕ್ಕೆ ಒಂದೇ ಜಿ.ಎಸ್.ಟಿ. ಎಂದು ಹೇಳುತ್ತಿರುವ ಪ್ರಧಾನಿ ಮೋದಿ ಏಕರೂಪದ ಒಂದೇ ಶಿಕ್ಷಣ ನೀತಿ ಯಾಕೆ ತರುತ್ತಿಲ್ಲ. ರಾಜ್ಯದ ಸಮಸ್ಯೆಗಳು ರಾಷ್ಟ್ರದಲ್ಲಿ ಚರ್ಚೆಯಾಗಬೇಕು ಎಂದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಕಾರ್ಯದರ್ಶಿ ಕಾಂ.ಸಿ.ವೈ. ಶಿವರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಕಮ್ಯುನಿಸ್ಟ್ ಪಕ್ಷ ಡಿ.26, 1925 ರಿಂದ ದೇಶದಲ್ಲಿ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ದುಡಿಯವ ವರ್ಗದ ಪರವಾಗಿ ನ್ಯಾಯಯುತವಾದ ಹಕ್ಕಿಗಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದರು.
ಬೆಳಗಾವಿಯ ವಿಧಾನ ಸಭೆ ಅಧಿವೇಶನದಲ್ಲಿ ಕಾರ್ಮಿಕರ ಹಾಗೂ ರೈತರ ಪರವಾಗಿ ಯಾವುದೇ ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಿಲ್ಲ. ಹಾಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಕಾರ್ಮಿಕ ಮುಖಂಡರಾದ ಜಯರಾಂ ರೆಡ್ಡಿ, ಎಸ್. ಕುಮಾರ್, ಬಸವರಾಜ್, ಜಮುನಾ ಬಾಯಿ ವೇದಿಕೆಯಲ್ಲಿದ್ದರು.
ಭಾಗ್ಯಮ್ಮ, ರತ್ನಮ್ಮ, ಸಾವಿತ್ರಮ್ಮ, ಸತ್ಯಕೀರ್ತಿ, ಗಣೇಶ್, ಟಿ.ಆರ್. ಉಮಾಪತಿ ಭಾಗವಹಿಸಿದ್ದರು.
ಬಡ ಕಾರ್ಮಿಕರ ಮಕ್ಕಳು ಖಾಸಗಿ ಶಾಲೆಯಲ್ಲಿ ಡೊನೇಷನ್ ನೀಡಿ ಶಿಕ್ಷಣವನ್ನು ಪಡೆಯುವುದು ಅಸಾಧ್ಯ. ಹಾಗಾಗಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಮಾತ್ರ ಸರಕಾರಿ ಉದ್ಯೋಗ ಕೊಡಬೇಕು.
ಕಾಂ.ಸಿ. ಸುರೇಶ್ ಬಾಬು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ, ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ.







