ಗೋರಿಗೆ ಹಾನಿ ಪೂರ್ವ ಯೋಜಿತ ಕೃತ್ಯ: ಸುನ್ನಿ ಸಂಘಟನೆಗಳ ಒಕ್ಕೂಟ
ಚಿಕ್ಕಮಗಳೂರು, ಡಿ.5: ಬಾಬಾಬುಡನ್‌ಗಿರಿಯಲ್ಲಿನ ನಿರ್ಬಂಧಿತ ಪ್ರದೇಶದಲ್ಲಿ ದ್ವಜ ಹಾರಿಸಿರುವುದು ಮತ್ತು ಗೋರಿಗೆ ಹಾನಿ ಮಾಡಿರುವುದು ಪೂರ್ವ ಯೋಜಿತ ಕೃತ್ಯವಾಗಿದ್ದು, ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಹಜರತ್ ದಾದ ಹಯಾತ್ ಮೀರ್‌ಖಲಂದರ್ ಸಮಿತಿಯ ಅಧ್ಯಕ್ಷ ಸಿರಾಜ್‌ಹುಸೇನ್ ಹೆಳಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದತ್ತ ಜಯಂತಿಯಂದು ಗಿರಿಯಲ್ಲಿನ ನಿಷೇಧಿತ ಪ್ರದೇಶದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಧ್ವಜ ಹಾರಿಸಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ತಕ್ಷಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದರು.
ಪ್ರತೀ ವರ್ಷ ಸಂಘಪರಿವಾರದ ಕಾರ್ಯಕರ್ತರು ದತ್ತಮಾಲೆ ಮತ್ತು ದತ್ತ ಜಯಂತಿ ಕಾರ್ಯಕ್ರಮದಲ್ಲಿ ಕಾನೂನು ಉಲ್ಲಂಘಿಸುತ್ತಿದ್ದು, ಅಂತಹ ಕೃತ್ಯವನ್ನು ಖಂಡಿಸಬೇಕಾದ ಶಾಸಕರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು 1989ರ ಪದ್ದತಿಯನ್ನು ಕೋರ್ಟ್ ಆದೇಶದಂತೆ ಅನುಸರಿಸದೆ ಉಲ್ಲಂಘಿಸಲು ಅನುವು ಮಾಡಿಕೊಡಲಾಗುತ್ತಿದೆ. ಹೊಸ ಆಚರಣೆಗಳಿಗೆ ಅವಕಾಶ ಮಾಡಿ ಕೊಡುತ್ತಿದ್ದಾರೆ ಎಂದು ಹೇಳಿದರು.
ದತ್ತ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಯಾರ ವಿರೋಧವೂ ಇಲ್ಲ. ಆದರೆ ರಾಜಕೀಯ ಲಾಭದ ಹುನ್ನಾರಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ನಡೆಸಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸುವುದಾಗಿ ತಿಳಿಸಿದರು.
ಸಂಘ ಪರಿವಾರದವರು ಆಗಾಗ್ಗೆ ಬಾಬಾಬುಡಾನ್‌ಗಿರಿ ಬಗ್ಗೆ ತಮ್ಮ ಬಳಿ 1817 ಮತ್ತು 1877 ದಾಖಲೆಗಳಿವೆ. ಸುಪ್ರೀಂ ಕೋರ್ಟ್‌ಗೆ ಪ್ರಕರಣ ದಾಖಲಿಸಿದ್ದೇವೆ. ಎಂದು ಹೇಳಿಕೆ ನೀಡುತ್ತಾರೆ. ಅವೆಲ್ಲವೂ ಸುಳ್ಳು. ಅಂತಹ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಮತ್ತು ಕೋರ್ಟ್ ಮೊರೆ ಹೋಗಿರುವ ದಾಖಲೆಯನ್ನು ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು. 1995ರ ಪಹಣಿ ತೋರಿಸಿ 1942ರಿಂದ ದಾಖಲೆ ಇದೆ ಎನ್ನುತ್ತಾರೆ. ಹಾಗಾದರೆ 1994ರ ಪಹಣಿ ತೋರಿಸಲಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯೂಸುಫ್‌ಹಾಜಿ, ಮಹಮ್ಮದ್ ಸಫಾನ್, ಶಂಶುದ್ದೀನ್, ಔರಂಗ್ ಪಾಶ, ಮುಬಾರಕ್ ಉಪಸ್ಥಿತರಿದ್ದರು.







