"ಅಂಬೇಡ್ಕರ್ ಕಂಡ ಕನಸಿನ ಭಾರತದಲ್ಲಿ ನಾವು ಬುದುಕುತಿದ್ದೇವ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ"
ಪ್ರಗತಿಪರ ಚಿಂತಕ ಡಾ.ಎಸ್.ತುಕಾರಾಂ

ಮೈಸೂರು,ಡಿ.6: ಅಂಬೇಡ್ಕರ್ ಕಂಡ ಕನಸಿನ ಭಾರತದಲ್ಲಿ ನಾವು ಬದುಕುತ್ತಿದ್ದೇವ ಎಂಬ ಪ್ರಶ್ನೆಯನ್ನು ನಮ್ಮೊಳಗೆ ನಾವು ಹಾಕಿಕೊಳ್ಳುವ ಕಾಲ ಬಂದಿದೆ ಎಂದು ಪ್ರಗತಿಪರ ಚಿಂತಕ ಡಾ.ಎಸ್.ತುಕಾರಾಂ ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್‍ರವರ 62ನೇ ಮಹಾಪರಿನಿಬ್ಬಾಣದಿನದ ಅಂಗವಾಗಿ ಬುಧವಾರ ನಗರದ ಜಗನ್ಮೋಹನ ಅರಮನೆಯ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಮೋದಿಯ ಮೂರು ವರ್ಷದ ಆಡಳಿತ ನಂತರ ಅಂಬೇಡ್ಕರ್ ಪನರ್ ಮನನ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಕಂಡ ಭಾರತದಲ್ಲಿ ನಾವು ಬದುಕುತಿದ್ದೇವ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಎಲ್ಲಿ ನೋಡಿದರು ಅಸಮಾನತೆ ತಾಂಡವಾಡುತ್ತಿದೆ. ಯಾವ ಹೊತ್ತಿನಲ್ಲಿ ನಾವು ಬದುಕುತಿದ್ದೇವೆ ಎಂಬ ಪ್ರಶ್ನೆ ಎದುರಾಗಿದೆ. ಬುಡಕಟ್ಟು ಜನಾಂಗದವರ ಮನೆಗಳನ್ನು ಕಿತ್ತು ಮತ್ತೆಲ್ಲೋ ಮನೆ ನಿರ್ಮಿಸಿಕೊಡುತ್ತೇವೆ ಎಂಬ ಹೊತ್ತು ಒಂದು ಕಡೆಯಾದರೆ ಹನುಮ ಜಯಂತಿ ಹೆಸರಿನಲ್ಲಿ ಅಶಾಂತಿ ಕದಡಿ ಸಂಘರ್ಷ ಉಂಟು ಮಾಡುವ ಮತ್ತೊಂದು ಹೊತ್ತು. ಇಂತಹ ಸನ್ನಿವೇಶವನ್ನು ಹುಟ್ಟುಹಾಕುತ್ತಿರುವ ಜನರು ಜಾತಿ ಬಿಟ್ಟು ಮನುಷ್ಯರಾಗಬಾರದೇ? ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಪುನರ್‍ಮನನ ಮಾಡುವುದನ್ನು ಬಿಟ್ಟು ನಾವು ಎಲ್ಲಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಬಡವರು, ದಲಿತದರು, ಕೃಷಿಕರು, ರೈತ ಕಾರ್ಮಿಕರು, ಬುಡಕಟ್ಟು ಜನತೆ, ಅಲ್ಪಸಂಖ್ಯಾತರು ಮತ್ತು ಅಸಂಘಟಿತ ಜನ ಸಮುದಾಯಗಳ ಬುದುಕು ಮೂರಾಬಟ್ಟೆಯಾಗುತ್ತಿದೆ. ಗುಜರಾತ್ ಮಾದರಿ ಅಭಿವೃದ್ಧಿಯನ್ನು ಬಿಂಬಿಸಿ ಸಂವಿಧಾನದ ಪರಿಮಿತಯಲ್ಲೇ ಆಡಳಿತ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್‍ದ ಸರ್ಕಾರ ತನ್ನ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ಭಾವೈಕ್ಯತೆಯ ಭಾರತವನ್ನು ಒಡೆದು ಹಿಂದೂ ರಾಷ್ಟ್ರ ಅಥವಾ ಹಿಂದೂ ಪ್ರಭುತ್ವ ಎಂದು ಘೋಷಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮೆಲ್ಲ ನೋವು ನಲಿವುಗಳಿಗೆ ಸದಾ ಸ್ಪಂಧಿಸಿ ನಮ್ಮ ಏಳ್ಗೆಗೆ ಪತ್ರಿಕೆ ಮೂಲಕ ಬೆಳಕು ಚೆಲ್ಲಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರ ದ್ವನಿಯಾಗಿದ್ದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರು ನಮ್ಮನ್ನು ಬಿಟ್ಟು ಇಷ್ಟು ಬೇಗ ಅಗಲಿರುವುದು ನಮ್ಮ ಚಳುವಳಿಗಳಿಗೆ ಹಿನ್ನಡೆಯಾಗಿದೆ ಎಂದು ಭಾವೋಗ್ವೇದಕ್ಕೆ ಒಳಗಾದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಸಂ.ಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಮಾತನಾಡಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಸಿದ್ದ ಹಿಂದಿನ ಸಂಸದರು ಮೈಸೂರಿನ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಆದರೆ ಈಗಿನ ಸಂಸದ ಪ್ರತಾಪ್ ಸಿಂಹ ಎಳಸೆಳಸಾಗಿ ಮಾತಾನಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುವ ಮೂಲಕ ಮೈಸೂರಿನ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಇನ್ನೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತಿಗೆ ಮಿತಿಯೇ ಇಲ್ಲದಂತೆ ಏನೇನೋ ಮಾತನಾಡುತ್ತಾರೆ. ಈತನಿಗೆ ಅವರ ಅಪ್ಪ ಅಮ್ಮ ಸಹ ಸರಿಯಾಗಿ ಬುದ್ಧಿ ಹೇಳಿಕೊಡಲಿಲ್ಲ ಎನ್ನಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವರಿಷ್ಠರು ಹುಚ್ಚುನಾಯಿಗಳನ್ನು ಬೀದಿಗೆ ಬಿಟ್ಟು ಯಾರನ್ನಾದರು ಕಚ್ಚಲಿ ನಮಗೆ ಅಧಿಕಾರ ಧಕ್ಕಿದರೆ ಸಾಕು ಎಂದು ಎದುರು ನೋಡುತ್ತಿದ್ದಾರೆ. ಪ್ರಧಾನಿ ಮೋದಿಯಿಂದ ಹಿಡಿದು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಯಡಿಯೂರಪ್ಪ ಅವರ ತನಕ ಎಲ್ಲರೂ ಅಧಿಕಾರದ ಹಿಂದೆ ಬಿದ್ದಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪತ್ರಕರ್ತ ಶಿವಸುಂದರ್ ನೆರವೇರಿಸಿದರು. ಪ್ರಗತಿಪರ ಚಿಂತಕ ಶ್ರೀಪಾದಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪದಾಧಿಕಾರಿಗಳಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಉಮಾಮಹದೇವ, ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ಧಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.







