ಸಫ್ವಾನ್ ಅಪಹರಣ, ಕೊಲೆ ಪ್ರಕರಣ : ಮತ್ತಿಬ್ಬರ ಬಂಧನ
ಬಂಧಿತರ ಸಂಖ್ಯೆ ಐದಕ್ಕೆ

ಮಂಗಳೂರು,ಡಿ.6: ಕಾಟಿಪಳ್ಳದ ನಿವಾಸಿ ಸಫ್ವಾನ್ (22)ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಚೊಕ್ಕಬೆಟ್ಟು ನಿವಾಸಿಗಳಾದ ದಾವುದ್ ನೌಶಾದ್ (35) ಮತ್ತು ಮನ್ಸೂರ್ (34) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಮೂಡುಬಿದಿರೆಯ ಮಹಮ್ಮದ್ ಫೈಝಲ್ ಇಬ್ರಾಹೀಂ ಶೇಖ್ ಯಾನೆ ಟೊಪ್ಪಿಫೈಝಲ್ ಯಾನೆ ಬಾಂಬೆ ಫೈಝಲ್ (36), ಕೃಷ್ಣಾಪುರ ಪಮ್ಮೀಸ್ ಕಾಂಪೌಂಡ್ ನಿವಾಸಿ ಸಾಹಿಲ್ ಇಸ್ಮಾಯೀಲ್ (22) ಮತ್ತು ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪದಲ್ಲಿ ಖಾದರ್ ಸಫಾ ಎಂಬವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಈ ಆರೋಪಿಗಳ ಪೈಕಿ ಮಹಮ್ಮದ್ ಫೈಝಲ್ ಮತ್ತು ಸಾಹಿಲ್ ಇಸ್ಮಾಯಿಲ್ ರನ್ನು ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದರೆ, ಖಾದರ್ ಸಫಾ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಈ ಮೂಲಕ ಸಫ್ವಾನ್ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐದು ಮಂದಿಯನ್ನು ಬಂಧಿಸಿದಂತಾಗಿದೆ. ಪ್ರಮುಖ ಆರೋಪಿಗಳ ಬಂಧನ ಆಗಬೇಕಾಗಿದೆ.
ಸಫ್ವಾನ್‌ನನ್ನು ಅ.5ರಂದು ಅಪಹರಣ ಮಾಡಲಾಗಿತ್ತು. ಕಾರ್ಕಳ ಸಚ್ಚರಿಪೇಟೆ ಸಮೀಪ ಕೊಲೆಗೈದು, ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆದು ಹೋಗಿದ್ದರು. ಬಂಧಿತ ಆರೋಪಿಗಳು ನೀಡಿದ್ದ ಮಾಹಿತಿಯಂತೆ ಪೊಲೀಸರು ಮೃತದೇಹವನ್ನು ಎಸೆದುಹೋದ ಆಗುಂಬೆ ಘಾಟಿಯಲ್ಲಿ ಹುಡುಕಾಟ ನಡೆಸಿದ ಬಳಿಕ ಮೃತದೇಹದ ಅವಶೇಷಗಳನ್ನು ಪತ್ತೆಯಾಗಿದ್ದವು.





