ರಾಹುಲ್‌ರನ್ನು ಹೀರೋ ಆಗಿಸಿದ ಗುಜರಾತ್ ಚುನಾವಣೆ : ಶಿವಸೇನೆ

ಮುಂಬೈ, ಡಿ.6: ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ಹೀರೋ’ ಆಗಿ ಹೊರಹೊಮ್ಮಿದ್ದಾರೆ ಎಂದು ಶಿವಸೇನೆ ಶ್ಲಾಘಿಸಿದ್ದು, ರಾಹುಲ್ ಸತತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಹಿಂದುತ್ವಕ್ಕೆ ದೊರೆತ ಗೆಲುವಾಗಿದೆ ಎಂದು ವಿಶ್ಲೇಷಿಸಿದೆ.
ಆರಂಭದಲ್ಲಿ ತಮಗೆ ಸುಲಭದ ಗೆಲುವು ಖಚಿತ ಎಂದೇ ಬಿಜೆಪಿ ಭಾವಿಸಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಕಸರತ್ತು ನಡೆಸಬೇಕಾಗಿ ಬಂದಿರುವುದು ರಾಹುಲ್ ಗಾಂಧಿ ‘ಹೀರೊ’ ಆಗಿ ಹೊರಹೊಮ್ಮಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ.
ರಾಹುಲ್ ಗಾಂಧಿ ಇನ್ನು ಮುಂದೆ ‘ಪಪ್ಪು’ ಆಗಿರುವುದಿಲ್ಲ ಎಂಬ ಸತ್ಯವನ್ನು ಬಿಜೆಪಿ ನಾಯಕರು ವಿಶಾಲ ಹೃದಯದಿಂದ ಒಪ್ಪಿಕೊಳ್ಳಬೇಕು . ಅಲ್ಲದೆ ರಾಹುಲ್ ಸತತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ಟೀಕಿಸುವ ಬದಲು ಅದನ್ನು ಸ್ವಾಗತಿಸಬೇಕು. ರಾಹುಲ್ ಪಕ್ಷವನ್ನು ಬೋಗಸ್ ಜಾತ್ಯಾತೀತತೆಯಿಂದ ಹಿಂದುತ್ವದೆಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ಶಿವಸೇನೆ ತಿಳಿಸಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಏರುವುದನ್ನು ‘ಔರಂಗಝೇಬ್ ಸಂಸ್ಕೃತಿ’ ಎಂದು ಪ್ರಧಾನಿ ಮೋದಿ ಟೀಕಿಸಿರುವುದನ್ನು ಉಲ್ಲೇಖಿಸಿದ ಶಿವಸೇನೆ, ರಾಹುಲ್ ಗಾಂಧಿ ಓರ್ವ ಸಮರ್ಥ ನಾಯಕ ಎಂದು ಮೋದಿ ಒಪ್ಪಿಕೊಂಡಿರುವುದನ್ನು ಈ ಟೀಕೆ ಸೂಚಿಸುತ್ತದೆ ಎಂದು ಶಿವಸೇನೆ ಹೇಳಿದೆ.
ಬಿಜೆಪಿಯ ಸತತ ನಿಂದೆ ಮತ್ತು ಕುಟಿಲ ರಾಜಕೀಯದಿಂದಾಗಿ ದೇಶದಾದ್ಯಂತ ಕಾಂಗ್ರೆಸ್‌ನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ.ರಾಹುಲ್ ಗಾಂಧಿ ಪಕ್ಷವನ್ನು ಈ ಬಿಕ್ಕಟ್ಟಿನಿಂದ ಹೊರತರುವ ಮಾರ್ಗ ಕಂಡುಹಿಡಿಯುವುದರಲ್ಲಿ ಅನುಮಾನವಿಲ್ಲ ಎಂದು ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ಉಲ್ಲೇಖಿಸಲಾಗಿದೆ.







