ಬಾಬ್ರ ಮಸೀದಿ ಧ್ವಂಸ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ಕೋಲಾರ, ಡಿ.6: ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷಗಳಾದ ಹಿನ್ನೆಲೆಯಲ್ಲಿ ಘಟನೆಯನ್ನು ಖಂಡಿಸಿ ಎಸ್‌ಡಿಪಿಐ ವತಿಯಿಂದ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಘಟನೆಯಿಂದ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇಡೀ ಜಗತ್ತಿನ ಮುಂದೆ ನಾಚಿಕೆ ಮತ್ತು ಅವಮಾನದಿಂದ ತಲೆತಗ್ಗಿಸುವಂತಾಗಿದೆ. ಸಂಘ ಪರಿವಾರದ ರಥಯಾತ್ರೆ ಮತ್ತು ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವಿರಾರು ಅಮಾಯಕ ಭಾರತೀಯರು ಕೊಲ್ಲಲ್ಪಟ್ಟರು. ಈ ಭೀಕರ ಘಟನೆಯಿಂದಾಗಿ ಭಾರತೀಯ ಸಮಾಜದಲ್ಲಿ ಭದ್ರವಾಗಿ ನೆಲಯೂರಿದ್ದ ಕೋಮು ಸಾಮರಸ್ಯ, ಸಹಬಾಳ್ವೆ ಮತ್ತು ಅನ್ಯೋನ್ಯತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಶತಮಾನಗಳಿಂದ ಒಂದೇ ಕುಟುಂಬದಂತೆ ವಾಸಿಸುತ್ತಿದ್ದ ಸಮುದಾಯಗಳ ಮಧ್ಯೆ ಅಪನಂಬಿಕೆ ಮತ್ತು ದ್ವೇಷದ ಹೊಗೆಯಾಡಲಾರಂಭಿಸಿದೆ. ಬಾಬ್ರಿ ಮಸೀದಿ ಧ್ವಂಸದ ಗಾಯವು ಇಂದಿಗೂ ಭಾರತೀಯ ನಾಗರಿಕರ ಹೃದಯದಿಂದ ಮಾಯವಾಗದೆ ಉಳಿದಿದೆ ಎಂದು ಈ ವೇಳೆ ಪ್ರತಿಭಟನಾಕಾರರು ವಿಷಾದಿಸಿದರು.
ಅಂದಿನ ಪ್ರಧಾನಿ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸುವ ಭರವಸೆ ನೀಡಿದ್ದರು. ಈ ವಿನಾಶದ ಕಾರಣಗಳನ್ನು ಪತ್ತೆಹಚ್ಚಲು ನೇಮಕಗೊಂಡಿದ್ದ ಲಿಬರ್ಹಾನ್ ಆಯೋಗವು 19 ವರ್ಷಗಳ ನಂತರ ತನ್ನ ವರದಿಯಲ್ಲಿ 68 ಅಪರಾಧಿಗಳನ್ನು ಹೆಸರಿಸಿತ್ತು. ಆದರೆ 25 ವರ್ಷಗಳ ನಂತರ ಇಂದಿಗೂ ಯಾವ ಸರಕಾರಗಳೂ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸುವ, ಅಪರಾಧಿಗಳನ್ನು ಶಿಕ್ಷಿಸುವ ಭರವಸೆಗಳನ್ನು ಈಡೇರಿಸಿಲ್ಲ ಎಂದ ಅವರು, ಮಸೀದಿ ಪುನರ್ ನಿರ್ಮಾಣ ಮತ್ತು ಸ್ಮಾರಕ ಧ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವವರೆಗೆ ದೇಶದ ಜಾತ್ಯತೀತತೆಯ ಮರುಸ್ಥಾಪನೆ ಸಾಧ್ಯವಿಲ್ಲ ಎಂದರು.
ಎಸ್‌ಡಿಪಿಐ ದೇಶಾದ್ಯಂತ ಈ ಘಟನೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಬಾಬರಿ ಮಸೀದಿ ಕೇವಲ ಒಂದು ಕಟ್ಟಡವಾಗಿರಲಿಲ್ಲ. ಅದು ನಮ್ಮ ಸಂವಿಧಾನದ ಮೂಲ ಆಶಯಗಳ ಅಂಶಗಳಲ್ಲಿ ಒಂದಾಗಿದೆ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸುತ್ತಾ ಈ ಕಾರ್ಯಕ್ರಮದ ಮೂಲಕ ಬಾಬರಿ ಮಸೀದಿ ಪುನರ್ ನಿರ್ಮಾಣವಾಗಬೇಕು. ಲಿಬರ್ಹನ್ ಅಯೋಗ ವರದಿಯಲ್ಲಿ ಉಲ್ಲೇಖವಾಗಿರುವ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜಾರಿಯಾಗಬೇಕೆಂದು ಈ ವೇಳೆ ಪಕ್ಷದ ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಶಾಮೀರ್‌ಪಾಶ, ಜಮಾಲ್ ಅಹ್ಮದ್ ಶರೀಫ್, ಯಾಸೀನ್‌ಖಾನ್, ಮುಬಾರಕ್ ದರ್ವೇಝ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಸದಸ್ಯ ಝುಬೇರ್‌ಖಾನ್, ಫೈರೋಝ್‌ಖಾನ್ ಮತ್ತಿತರರ ಮುಖಂಡರು ಭಾಗವಹಿಸಿದ್ದರು.







