ಅಕಾಲಿಕ ಮಳೆಗೆ ರಾಗಿ ಫಸಲು ನಾಶ; ಸಂಕಷ್ಟದಲ್ಲಿ ರೈತ

ಚಾಮರಾಜನಗರ, ಡಿ.6: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಸುತ್ತಮುತ್ತ ಇರುವ ಕಾಡಂಚಿನ ದೊಡ್ಡಣೆ, ನಾಗಮಲೆ ಕಾಡುಹೊಲ, ಕೀರನಹೊಲ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರೈತರು ಬೆಳೆದಿದ್ದ ರಾಗಿ ಫಸಲು ಕಳೆದ ಎರಡು ದಿನಗಳಿಂದ ಬಿದ್ದ ಮಳೆಗೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತರು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಕಳೆದ 4 ತಿಂಗಳಿಂದ ಹತ್ತಾರು ಎಕರೆ ರಾಗಿ ಹಾಕಿ, ಅದು ಫಸಲಿಗೆ ಬಂದು ಕಟಾವು ಮಾಡಿ ಶೇಖರಿಸಿಟ್ಟಿದ್ದ ಸಮಯದಲ್ಲಿ ಬಿದ್ದ ಮಳೆಯಿಂದ ನಾಶವಾಗಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ನಷ್ಟ ಪರಿಹಾರ ನೀಡಲು ಕ್ರಮಕೈಗೊಳ್ಳದೆ ನಿರ್ಲಕ್ಷ ತೋರಿಸುತ್ತಿದ್ದಾರೆ.
ಇನ್ನಾದರು ನಷ್ಟ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಓಖಿ ಚಂಡಮಾರುತ ಬೀಸಿದ ಪರಿಣಾಮ ಬಿದ್ದ ನಿರಂತರ ತುಂತುರು ಮಳೆಯಿಂದ ರಾಗಿ ಬೆಳೆ ನಾಶವಾಗಿದೆ. ರೈತರು ಸಾಲ ಮಾಡಿ ವ್ಯವಸಾಯ ಮಾಡಿದ ಬೆಳೆಗಳು ಮಳೆಯ ನೀರಿಗೆ ಕೊಚ್ಚಿ ಹೋಗಿದೆ. ಇಷ್ಟೆಲ್ಲ ಆದರೂ ಅಧಿಕಾರಿಗಳು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರದೇ ಇರುವುದು ಖೇದಕರ ಎಂದು ರೈತರು ಹೇಳಿದ್ದಾರೆ.





