ದಲಿತಪರ ಸಂಘಟನೆಗಳ-ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ
ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ

ಮಾಲೂರು, ಡಿ.6: ಡಾ.ಬಿ.ಆರ್. ಅಂಬೇಡ್ಕರ್ ಅವರ 61ನೆ ಮಹಾ ಪರಿನಿರ್ವಾಹಣಾ ದಿನವಾದ ಡಿ. 6ರಂದು ದಲಿತ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ.
ಪಟ್ಟಣದ ಉದ್ಯಾನವನದಲ್ಲಿ ದಲಿತ ಪರ ಸಂಘಟನೆಗಳು, ರಾಜಕೀಯ ಮುಖಂಡರು ಮಹಾ ಪರಿನಿರ್ವಾಹಣಾ ದಿನದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಬಿಜೆಪಿ ಮುಖಂಡರು ಬ್ಯಾಂಡ್ ಬಾರಿಸುತ್ತಾ, ಬಿಜೆಪಿ ಧ್ವಜಗಳನ್ನು ಹಿಡಿದು ಕುಣಿಯುತ್ತಿದ್ದರು. ಇದನ್ನು ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ದಲಿತ ನಾಗರಿಕ ಸಮಿತಿಯ ವಿಭಾಗೀಯ ಸಂಚಾಲಕ ಪುರಸನಹಳ್ಳಿ ಶ್ರೀನಿವಾಸ್ ಮಾತನಾಡಿ , 25 ವರ್ಷದ ಹಿಂದೆ ಆಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿರುವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕಳೆದುಕೊಂಡಿರುವ ನೋವಿನ ಸಂದರ್ಭ ಸಂಘ ಪರಿವಾರ ಘೋಷಣೆ ಕೂಗುತ್ತ, ಬ್ಯಾಂಡ್ ಬಾರಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ. ದಲಿತ ಪರ ಸಂಘಟನೆಗಳ ಮುಖಂಡರಾದ ಸಂತೋಷ್, ಎ.ಕೆ. ವೆಂಕಟೇಶ್, ಚಲಪತಿ, ತಿಪ್ಪಸಂದ್ರ ಶ್ರೀನಿವಾಸ್, ಮೈಲಾಂಡಹಳ್ಳಿ ಶ್ರೀನಿವಾಸ್, ಮೈಲಾಂಡಹಳ್ಳಿ ಮುನಿಯಪ್ಪ, ಮುನಿನಾರಾಯಣ, ಎಂ.ಎಂ. ಶಬ್ಬೀರ್‌ವುಲ್ಲಾ ದೂರು ದಾಖಲಿಸಿದ್ದಾರೆ.





