ಮಂಡ್ಯ : ಕುಖ್ಯಾತ ರೌಡಿ ಅಶೋಕ್ ಹತ್ಯೆ ಸಂಚು ವಿಫಲ : ಮೂವರ ಬಂಧನ
ಮಂಡ್ಯ, ಡಿ.6: ಕುಖ್ಯಾತ ರೌಡಿ ಅಶೋಕ್ ಅಲಿಯಾಸ್ ಪೈ ಮತ್ತೊಮ್ಮೆ ಹತ್ಯೆ ಯತ್ನದಿಂದ ಪಾರಾಗಿದ್ದು, ಮೂವರು ಆರೋಪಿಗಳು ಬಂಧಿತರಾಗಿದ್ದಾರೆ.
ಆರ್‍ಟಿಓ ಕಚೇರಿಗೆ ಮಂಗಳವಾರ ಪೈ ಆಗಮಿಸುವ ನಿರೀಕ್ಷೆಯಲ್ಲಿ ಹತ್ಯೆಗೆ ಬಂಧಿತ ಆರೋಪಿಗಳು ರೂಪಿಸಿದ್ದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದು, ಅವರಿಂದ ಹತ್ಯೆಗೆ ಬಳಸಲು ಉದ್ದೇಶಿಸಿದ್ದ ಕಾರು, ಡ್ರಾಗನ್, ಲಾಂಗ್ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ಹತ್ಯೆಯಾಗಿದ್ದ ಜಡೇಜಾ ರವಿ ಅಣ್ಣನ ಮಗ ಮನು (ದಿಲೀಪ್), ರಘು ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿಯ ಹೆಸರು ಗೊತ್ತಾಗಿಲ್ಲ.
ಆರ್‍ಟಿಓ ಕಚೇರಿಯಷ್ಟೇ ಅಲ್ಲದೆ, ಹರಿಪ್ರಿಯ ಹೊಟೇಲ್ ಬಳಿಯೂ ಹತ್ಯೆಯ ಮತ್ತೊಂದು ಸಂಚನ್ನು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ. ಏಕಕಾಲದಲ್ಲಿ ದಾಳಿ ನಡೆಸುವ ಈ ಪ್ರಯತ್ನದಲ್ಲಿ ಕಾರಿನಲ್ಲಿ ಹೊಂಚು ಹಾಕುತ್ತಿದ್ದ ತಂಡ ಪರಾರಿಯಾಗಿದೆ ಎಂದೂ ಹೇಳಲಾಗಿದೆ.
ರೌಡಿ ಜಡೇಜಾ ರವಿ ಹತ್ಯೆಯ 28 ಆರೋಪಿಗಳಲ್ಲಿ ಪೈ ಕೂಡ ಒಬ್ಬನಾಗಿದ್ದ. ಆರೋಪ ಸಾಬೀತಾಗಿದ್ದರಿಂದ ಕೆಳ ನ್ಯಾಯಾಲಯ ಈ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್ 2016ರಲ್ಲಿ ಎಲ್ಲರನ್ನೂ ಖುಲಾಸೆಗೊಳಿಸಿತ್ತು.
ಕಳೆದ ಎರಡು ದಶಕಗಳಿಂದ ಮಂಡ್ಯ ಭೂಗತ ಲೋಕದಲ್ಲಿ ಪೈ ಹೆಸರು ಬಹಳ ದೊಡ್ಡದು. ನೋಟು ರದ್ಧತಿ ನಂತರ ಮಂಡ್ಯ ತಾಲೂಕಿನ ಮಾದರಹಳ್ಳಿ ಬಳಿ ನಡೆದ ಈತನ ಹತ್ಯೆಯ ಯತ್ನ ಮತ್ತೊಮ್ಮೆ ಮಂಡ್ಯದಲ್ಲಿ ಸಂಚಲನ ಉಂಟುಮಾಡಿತ್ತು.
ರಾಘವೇಂದ್ರ ಎಂಬುವವರ ಬಳಿಯಿದ್ದ ಹಳೇ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಾಯಿಸುವ ಪ್ರಯತ್ನದಲ್ಲಿ ವೈಮನಸ್ಯ ಉಂಟಾಗಿ ಪೈ ಹತ್ಯೆಗೆ ಭಾರಿ ಪ್ರಯತ್ನ ನಡೆಸಲಾಗಿತ್ತು. ಸಮಯಪ್ರಜ್ಞೆಯಿಂದ ಈ ಹತ್ಯೆ ಯತ್ನದಲ್ಲಿ ಪಾರಾಗಿದ್ದ. ಆ ನಂತರ ಮಂಡ್ಯದಲ್ಲಿ ಸ್ತಬ್ಧಗೊಂಡಿದ್ದ ಭೂಗತ ಚಟುವಟಿಕೆ ಮಂಗಳವಾರದ ಹತ್ಯೆ ಸಂಚಿನ ಮೂಲಕ ಮರುಜೀವ ಪಡೆದುಕೊಂಡಿದೆ.







